ಬೆಂಗಳೂರು, ಸೆ 02 (DaijiworldNews/MS): ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳು, ಹಾಗೂ ಮೀನುಗಾರರ ಸಮಸ್ಯೆಗಳ ಕುರಿತಂತೆ ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಉನ್ನತ ಸಭೆ ನಡೆಯಿತು.
ಸಭೆಯಲ್ಲಿ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್, ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತೀಕ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟಿಡಿಆರ್ ಬಳಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3406 ದೋಣಿಗಳ ಪೈಕಿ 1660 ಮೋಟಾರೀಕೃತ ದೋಣಿಗಳು, 1432 ಯಾಂತ್ರೀಕೃತ ದೋಣಿಗಳು ಹಾಗೂ 314 ನಾಡದೋಣಿಗಳು ನೋಂದಣಿಯಾಗಿ ಕಾರ್ಯಚರಿಸುತ್ತಿವೆ.
ಯಾಂತ್ರೀಕೃತ ದೋಣಿಗಳಿಗೆ ಇದುವರೆಗೆ ವಾರ್ಷಿಕ ಮಿತಿ 1.50 ಲಕ್ಷ ಕಿಲೋ ಲೀಟರ್ ಕರ ರಹಿತ ಡೀಸಲ್ ನ್ನು ವಿತರಿಸಲಾಗುತ್ತಿತ್ತು, ಪ್ರಸ್ತುತ ಸಾಲಿನಿಂದ ಯಾಂತ್ರೀಕೃತ ದೋಣಿಗಳಿಗೆ ವಾರ್ಷಿಕ 1.50 ಲಕ್ಷ ಕಿಲೋ ಲೀಟರ್ ನಿಂದ 2.00 ಲಕ್ಷ ಕಿಲೋ ಲೀಟರ್ ವರೆಗೆ ಹೆಚ್ಚಿಸಿ ಕರ ಡೀಸಲ್ ನ್ನು ವಿತರಿಸಲು ಆದೇಶಿಸುವ ಬಗ್ಗೆ ಚರ್ಚಿಸಲಾಯಿತು.
ಕೇಂದ್ರ ಸರ್ಕಾರದಿಂದ ಪಡಿತರ ದರದ ಸೀಮೆ ಎಣ್ಣೆ ಅಗತ್ಯ ಪ್ರಮಾಣದಲ್ಲಿ ಮತ್ತು ಅವಶ್ಯಕತ ಇರುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲದಿರುವುದರಿಂದ ರಾಜ್ಯ ಸರ್ಕಾರವು ರಾಜ್ಯದ ಅನುದಾನದಲ್ಲಿ ನಾಡದೋಣಿ ಮಾಲೀಕರಿಗೆ ನಿರಂತರವಾಗಿ ಸೀಮೆಎಣ್ಣೆಯನ್ನು ಪೂರೈಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕ ಸೀಮಎಣ್ಣೆ ಯನ್ನು ಖರೀದಿಸಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ(ನಿ) ಮಂಗಳೂರು ರವರ ಮುಖಾಂತರ ನಾಡದೋಣಿ ಮಾಲೀಕರಿಗೆ ಸರಬರಾಜು ಮಾಡಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕೈಗಾರಿಕ ಸೀಮಎಣ್ಣೆಯನ್ನು ಖರೀದಿಸುವ ನಾಡದೋಣಿ ಮಾಲೀಕರಿಗೆ ಪ್ರತಿ ಲೀಟರ್ ಗೆ ರೂ. 35/-ರಂತ ರಿಯಾಯಿತಿ ನೀಡಲಾಗುವುದು.
ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಅಭಿವೃದ್ಧಿ ಕಾಮಗಾರಿ ಅತ್ಯಗತ್ಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೂ.49.50 ಕೋಟಿ ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಂಪುಟ ಸಭೆಯ ಅನುಮೋದನೆ ಪಡೆಯಬೇಕಾಗಿರುತ್ತದೆ.
ಮಂಗಳೂರು ಮೀನುಗಾರಿಕೆ ಬಂದರಿನ ವಾರ್ಫ್ ಮತ್ತು ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿಗೆ ರೂ.2.50 ಕೋಟಿ ಅನುದಾನ ಒದಗಿಸಲಾಗಿದ್ದು, ಈ ತಿಂಗಳಿನಲ್ಲಿ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಬಂದರು ಇಲಾಖೆಯು ಸಹ ರೂ. 29,00 ಕೋಟಿ ಅನುದಾನ ಹೂಳತ್ತುವ ಕಾಮಗಾರಿ ತೆಗೆದುಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶ ನೀಡಲು ಬಾಕಿ ಇರುವ ಬಗ್ಗೆಯೂ ಚರ್ಚೆ ನಡೆಯಿತು.
ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳಿಗೆ ಜಟ್ಟಿ ನಿರ್ಮಾಣ ಮಾಡಲು ರೂ. 6.50 ಕೋಟಿ ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದ್ದು, NCR.M.P ಯೋಜನೆಯಡಿ ಅನುದಾನ ಒದಗಿದಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಹಿಂಡಿ ರಸ್ತೆಗಳಿದ್ದು, ಈ ಕೊಂಡಿ ರಸ್ತೆಗಳು ಹಾಳಾಗಿದ್ದು, ಸದರಿ ರಸ್ತೆಗಳ ದುರಸ್ತಿಗಾಗಿ ರೂ. 15.00 ಕೋಟಿಗಳ ಅನುದಾನ ಅಗತ್ಯವಿರುವ ಬಗ್ಗೆ ಚರ್ಚಿಸಲಾಯಿತು.