ದಿಸ್ಪುರ್, ಸೆ 03 (DaijiworldNews/AK):ಅಸ್ಸಾಂ ಸರ್ಕಾರ ಬಹುಪತ್ನಿತ್ವ ನಿಷೇಧಕ್ಕೆ ಮುಂದಾಗಿದ್ದು, ಡಿಸೆಂಬರ್ನಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ತಿನ್ಸುಕಿಯಾದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಸಭೆಯನ್ನುದ್ದೇಶಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮುಂದಿನ 45 ದಿನಗಳಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಯನ್ನು ಅಂತಿಮಗೊಳಿಸಲಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಬಹುಪತ್ನಿತ್ವ ನಿಷೇಧಿಸಬೇಕೆ ಅಥವಾ ಬೇಡವೇ ಎಂಬುದನ್ನು ವಿಶ್ಲೇಷಿಸಲು ಕಾನೂನು ಸಮಿತಿ ರಚಿಸಲಾಗಿದೆ. ನಾವು ಸಕಾರಾತ್ಮಕ ಚಿಂತನೆಗಳನ್ನು ಸ್ವೀಕರಿಸಿದ್ದೇವೆ. ಬಹುಪತ್ನಿತ್ವವನ್ನು ನಿಷೇಧಿಸುವ ಉದ್ದೇಶಿತ ಮಸೂದೆಯ ಕುರಿತು ನಾವು ಸಾರ್ವಜನಿಕ ಅಭಿಪ್ರಾಯ ಮತ್ತು ಸಲಹೆಗಳನ್ನು ಕೇಳಿದ್ದೇವೆ. ನಮ್ಮ ಸಾರ್ವಜನಿಕ ಸೂಚನೆಗೆ ಪ್ರತಿಕ್ರಿಯೆಯಾಗಿ ನಾವು ಒಟ್ಟು 149 ಸಲಹೆಗಳನ್ನು ಸ್ವೀಕರಿಸಿದ್ದೇವೆ. ಇವುಗಳಲ್ಲಿ 146 ಸಲಹೆಗಳು ಮಸೂದೆಯ ಪರವಾಗಿವೆ ಎಂದರು.
ಅವು ಬಹುಪತ್ನಿತ್ವ ನಿಷೇಧಿಸುವ ಕ್ರಮವನ್ನು ಬೆಂಬಲಿಸುತ್ತವೆ. ಆದಾಗ್ಯೂ, ಬಹುಪತ್ನಿತ್ವವನ್ನು ನಿಷೇಧಿಸಲು ಮೂರು ಸಲಹೆಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ನಮ್ಮ ಮುಂದಿನ ಹಂತವು ಮಸೂದೆಯನ್ನು ರಚಿಸುವುದು ಎಂದು ಶರ್ಮಾ ಅವರು ತಿಳಿಸಿದ್ದಾರೆ.