ಕೋಲಾರ, ಸೆ 03 (DaijiworldNews/SM): ರಾಜ್ಯದಲ್ಲಿ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಬರ ಪೀಡಿತ ತಾಲ್ಲೂಕು ಘೋಷಣೆ ಸಂಬಂಧ ನಾಳೆ ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಕೇಂದ್ರ ಸರ್ಕಾರದ ಮಾನದಂಡದ ಅನ್ವಯ ಬರಪೀಡಿತ ತಾಲ್ಲೂಕು ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 18 ರಂದು ಸುಮಾರು 113 ತಾಲ್ಲೂಕುಗಳನ್ನು ತಾತ್ಕಾಲಿಕ ಬರಪೀಡಿತ ಎಂದು ಪಟ್ಟಿ ಮಾಡಿಕೊಂಡಿದ್ದೇವೆ. ಆಗಸ್ಟ್ 31 ರಂದು ಸುಮಾರು 75 ತಾಲ್ಲೂಕು ಗಳ ಪಟ್ಟಿ ಸಿದ್ದ ಮಾಡಿದ್ದೇವೆ. ಯಾವ ತಾಲ್ಲೂಕು ಅರ್ಹವಾಗುತ್ತವೆ ಎಂಬುದನ್ನು ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು, ಅವಶ್ಯವಿದ್ದರೆ ಸಚಿವ ಸಂಪುಟದ ಗಮನಕ್ಕೂ ತರಲಾಗುವುದು ಎಂದರು.
ಆಯಾಯ ತಾಲ್ಲೂಕು ಬೆಳೆ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ನಾಳೆ ಬರಪೀಡಿತ ತಾಲ್ಲೂಕುಗಳ ಮೊದಲ ಪಟ್ಟಿ ಘೋಷಿಸಲಾಗುವುದು, ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಎರಡನೇ ಪಟ್ಟಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ಮಳೆ ಪರಿಸ್ಥಿತಿ ಆಧಾರದ ಮೂರನೇ ಪಟ್ಟಿ ಸಿದ್ಧಪಡಿಸಲೂ ಸರ್ಕಾರ ಚಿಂತನೆ ನಡೆಸಿದೆ.ಮೊದಲ ಹಾಗೂ ಎರಡನೇ ಪಟ್ಟಿಯಲ್ಲಿ ಬಿಟ್ಟುಹೋದ ತಾಲ್ಲೂಕುಗಳನ್ನು ಮೂರನೇ ಪಟ್ಟಿಯಲ್ಲಿ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.