ಮಡಿಕೇರಿ, ಎ10(SS): ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೊಂದಾಣಿಕೆಯನ್ನು ಮಾಡಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಏಕೈಕ ಉದ್ದೇಶದಿಂದ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದೊಂದು ಧೃತರಾಷ್ಟ್ರನ ಆಲಿಂಗನದಂತಾಗಿದೆ. ಸಾರ್ವಜನಿಕ ವಲಯದಲ್ಲಿ ಈ ಮೈತ್ರಿ ನಗೆಪಾಟಲಿಗೆ ಈಡಾಗಿದೆ. ರಾಜ್ಯದಲ್ಲಿ ಜಾತ್ಯತೀತ ಜನತಾದಳ ಎಲ್ಲೆಲ್ಲಿ ಗೆಲ್ಲುತ್ತದೆ ಎಂದು ಭಾವಿಸಿತ್ತೋ ಅಲ್ಲೆಲ್ಲ ಅದಕ್ಕೆ ಸೋಲು ಖಚಿತವಾಗಿದೆ ಎಂದು ಭವಿಷ್ಯ ನುಡಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದ ಮೋದಿ ಸರಕಾರ ರಾಷ್ಟ್ರದ ಸಮಗ್ರತೆಗೆ ಪೂರಕವಾಗಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಪ್ರಾಮಾಣಿಕವಾದ ಆಡಳಿತವನ್ನು ನೀಡಿದೆ. ಪ್ರಸ್ತುತ ರಾಷ್ಟ್ರದ ಜನತೆ ವ್ಯಕ್ತಿ ಮತ್ತು ಪಕ್ಷಕ್ಕೂ ಮಿಗಿಲಾಗಿ ರಾಷ್ಟ್ರ ಮೊದಲು ಎನ್ನುವುದನ್ನು ಅರ್ಥೈಸಿಕೊಂಡಿದೆ ಎಂದು ತಿಳಿಸಿದರು.
ರಾಜ್ಯದ ಬಿಜೆಪಿ 22ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಳೆದ ಐದು ವರ್ಷಗಳ ಅವಧಿಯ ಕಾರ್ಯವೈಖರಿಯ ಆಧಾರದಲ್ಲಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಅವರು ಗೆಲುವನ್ನು ಸಾಧಿಸಲಿದ್ದಾರೆ, ರಾಜ್ಯದಲ್ಲಿ ಮೈತ್ರಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರನ್ನು ಹೇಗಾದರೂ ಮಾಡಿ ಸೋಲಿಸುವ ಸಲುವಾಗಿ ಮೂವರು ಸುಮಲತಾರನ್ನು ನಿಲ್ಲಿಸಿರುವುದು ನಾಚಿಕೆ ಗೇಡಿನ ವಿಚಾರ. ಮಂಡ್ಯ ಕ್ಷೇತ್ರದಲ್ಲಿ ಸುಮಲತಾರಿಗೆ ಬಿಜೆಪಿ ಬೇಷರತ್ ಬೆಂಬಲ ನೀಡಿದ್ದು, ಅಲ್ಲಿ ನಿಖೀಲ್ ನೋಟಿಗೂ-ಸುಮಲತಾ ಓಟಿಗೂ ನಡುವೆ ಸ್ಪರ್ಧೆ ನಡೆಯುತ್ತಿದೆ ಎಂದು ಜನರೇ ಹೇಳಿಕೊಳ್ಳುತ್ತಿದ್ದು, ಸುಮಲತಾ ಗೆಲುವು ನಿಶ್ಚಿತವಾಗಿದೆ. ಹಾಸನದಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.