ಮುಂಬೈ, ಸೆ 07 (DaijiworldNews/AK): ಶಾಲೆಯೊಂದರಲ್ಲಿ ಅಭ್ಯಾಸದ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ತಲೆಗೆ ಚುಚ್ಚಿದ ಪರಿಣಾಮ 15 ವರ್ಷದ ಬಾಲಕ ಮೃತಪಟ್ಟ ದುರ್ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಗೋರೆಗಾಂವ್ ನ ಪುರಾರ್ ನ ಐಎನ್ ಟಿ ಇಂಗ್ಲಿಷ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಶಾಲೆಯ ಮೈದಾನದಲ್ಲಿ ಜಾವೆಲಿನ್ ಎಸೆತವನ್ನು ಅಭ್ಯಾಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಅವರು ಹೇಳಿದರು. ಈ ವೇಳೆ ಹುಜಾಫೆ ದವಾರೆ (15) ಎಂಬ ವಿದ್ಯಾರ್ಥಿಯೂ ತಾಲೂಕು ಮಟ್ಟದ ಸ್ಪರ್ಧೆಗಾಗಿ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯಾಸ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಜಾವೆಲಿನ್ ಎಸೆದಿದ್ದ. ಆಗ ಕೆಳಕ್ಕೆ ಬಾಗಿ ಶೂ ಲೇಸ್ ಕಟ್ಟುತ್ತಿದ್ದ ದವಾರೆ ತಲೆಗೆ ಜಾವೆಲಿನ್ ಚುಚ್ಚಿದೆ. ಇದರ ಪರಿಣಾಮ ದವಾರೆ ಸ್ಥಳದಲ್ಲಿ ಕುಸಿದು ಬಿದ್ದು, ತೀವ್ರ ರಕ್ತಸ್ರಾವಾಗಿ ಕೊನೆಯುಸಿರೆಳೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಇದೊಂದು ಆಕಸ್ಮಿಕ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಗೋರೆಗಾಂವ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿ ಜಾವೆಲಿನ್ ಥ್ರೋ ಅಭ್ಯಾಸದ ವೇಳೆ ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ತನಿಖೆ ವೇಳೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಶಾಲೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಮತ್ತು ಆಟದ ಮೈದಾನವನ್ನು ಆವರಿಸಿರುವ ದೃಶ್ಯಾವಳಿಗಳನ್ನು ಸಹ ಪೊಲೀಸರು ಹುಡುಕಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.