ಬೆಂಗಳೂರು, ಸೆ 08 (DaijiworldNews/AK): ಪದವಿಪೂರ್ವ ವಿದ್ಯಾರ್ಥಿನಿಯರ ಆರೋಗ್ಯ ಸಂರಕ್ಷಣೆಗಾಗಿ ಋತುಸ್ರಾವ ಕಪ್ (ಮೆನ್ಸ್ಟ್ರುಯಲ್ ಕಪ್) ವಿತರಿಸುವ ರಾಜ್ಯ ಸರ್ಕಾರದ ಮಹತ್ವದ ʻನನ್ನ ಮೈತ್ರಿʼ ಯೋಜನೆಗೆ ಸೆಪ್ಟೆಂಬರ್ 12ರಂದು ಮಂಗಳೂರಿನಲ್ಲಿ ಚಾಲನೆ ದೊರೆಯಲಿದೆ. ಮಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಲಿದೆ.
ಇದಕ್ಕಾಗಿ ಆರೋಗ್ಯ ಇಲಾಖೆಯು 2022ರ ಜುಲೈಯಲ್ಲಿ 17ರಿಂದ 18 ವರ್ಷದೊಳಗಿನ ಹೆಣ್ಣು ಮಕ್ಕಳು ಋತುಸ್ರಾವದ ಅವಧಿಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಬದಲಾಗಿ ಋತುಸ್ರಾವ ಕಪ್ ಬಳಕೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಚಾಮರಾಜ ನಗರದ ಯಳಂದೂರಿನ ತಲಾ 150 ವಿದ್ಯಾರ್ಥಿನಿಯರಂತೆ ಒಟ್ಟು 300 ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ಕಪ್ ಬಳಕೆಯೇ ಸುರಕ್ಷಿತ ಎಂಬ ಅಭಿಪ್ರಾಯ ಶೇ.90ರಷ್ಟು ವಿದ್ಯಾರ್ಥಿನಿಯರು ಮತ್ತು ಪೋಷಕರಿಂದ ವ್ಯಕ್ತವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾದ ದಕ್ಷಿಣಕನ್ನಡ ಜಿಲ್ಲೆಯಲ್ಲಿ 11,000 ವಿದ್ಯಾರ್ಥಿನಿಯರು ಹಾಗೂ ಚಾಮರಾಜ ನಗರದ 4,000 ವಿದ್ಯಾರ್ಥಿನಿಯರಿಗೆ ಕಪ್ ವಿತರಣೆಯಾಗಲಿದೆ. ಸರಕಾರಿ ಹಾಗೂ ಅನುದಾನಿತ ಕಾಲೇಜಿನಲ್ಲಿ ಕಲಿಯುತ್ತಿರುವ 17-18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಲಾ ಒಂದರಂತೆ ಒಟ್ಟು 15,000 ಕಪ್ ವಿತರಿಸಲಾಗುತ್ತದೆ ಎಂದರು.
ಈಗಾಗಲೇ ಆರೋಗ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಪ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪ್ರಯೋಗ ಯಶಸ್ವಿಯಾದ ಬಳಿಕ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.
ದೇಶದಲ್ಲೇ ಮೊದಲ ಬಾರಿಗೆ ಇಲಾಖೆ ಕೈಗೊಂಡ ಸಮೀಕ್ಷೆಗೆ ಉತ್ತಮ ಸ್ಪಂದನೆ ದೊರೆತಿದೆ. ತತ್ಪರಿಣಾಮವಾಗಿ ಮುಟ್ಟಿನ ಕಪ್ ವಿತರಣೆಯೇ ಸುರಕ್ಷಿತ ಎಂಬ ನಿರ್ಣಯಕ್ಕೆ ಬರಲಾಗಿದ್ದು, 5 ರಿಂದ 8 ವರ್ಷಗಳ ಮರುಬಳಕೆ ಮಾಡಬಹುದಾಗಿದೆ. ಪ್ರತಿ ಕಪ್ಗೆ 100 ರೂ. ಖರ್ಚಾಗಲಿದೆ ಖರೀದಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ.