ಕುಲಬುರ್ಗಿ, ಎ.10(AZM): ಶ್ರೀರಾಮನ ಹೆಸರಿನಲ್ಲಿ ಮತ ಕೇಳುತ್ತಿರುವ ಬಿಜೆಪಿಯವರು ದೇಶಭಕ್ತರಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಲಬುರ್ಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುವ ಕುರಿತು ಮಾತನಾಡುತ್ತಿದ್ದು, ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗಲಿದೆ ಎಂದು ಎಚ್ಚರಿಸಿದರು. ಮೋದಿಯನ್ನು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಆದರೆ ಪ್ರಧಾನಿಯಾಗಿ ಅವರು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿನ ಮೈತ್ರಿ ಸರಕಾರ ನುಡಿದಂತೆ ನಡೆದು ರೈತರ ಸಾಲಮನ್ನಾ ಮಾಡಿದೆ. ಆದರೆ, ಮೋದಿ ಏನು ಮಾಡಿದ್ದಾರೆ? ಯಾವ ಜನಪರ ಕೆಲಸ ಮಾಡಿದ್ದಾರೆ? ಎಂದು ಪ್ರಶ್ನಿಸಿದ ಖರ್ಗೆ, ಮತದಾರರ ಆಶೀರ್ವಾದದಿಂದ ನಾನು 11 ಬಾರಿ ಗೆದ್ದಿದ್ದೇನೆ. ಇದೀಗ ನನ್ನ ಹಣೆಬರಹ ಬರೆಯುವವರು ನೀವು ಮತದಾರರು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.