ಮೈಸೂರು,ಸೆ 09 (DaijiworldNews/AK) : ಪಶು ವೈದ್ಯರು ಆನೆಯೊಂದರ ಚಿಕಿತ್ಸೆಗಾಗಿ ಅಳವಡಿಸಿಕೊಂಡಿರುವ ವಿಶೇಷ ವಿಭಿನ್ನವಾದ ಕ್ರಮ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಗೊಂಡ ಆನೆಗೆ ಚಿಕಿತ್ಸೆ ನೀಡಲೆಂದು ಆನೆಗೆ ಪಾದರಕ್ಷೆ ತಯಾರಿಸಲಾಗಿದೆ.
ಹುಣಸೂರು ತಾಲೂಕಿನ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿರುವ 60 ವರ್ಷದ ಕುಮಾರಿ ಆನೆಯ ಕಾಲಿಗೆ ಗಾಯವಾಗಿತ್ತು. ಕುಮಾರಿ ಆನೆಯನ್ನು 2015ರಲ್ಲಿ ಕೇರಳ ಮೂಲದ ಸರ್ಕಸ್ ಕಂಪನಿಯಿಂದ ರಕ್ಷಣೆ ಮಾಡಿ ಕರೆತರಲಾಗಿತ್ತು. ಅಂದಿನಿಂದ ಕುಮಾರಿ ಆನೆ ದೊಡ್ಡ ಹರವೆ ಆನೆ ಕ್ಯಾಂಪ್ನಲ್ಲಿ ಅಶ್ರಯ ಪಡೆದು ಆರಾಮಾಗಿತ್ತು.
ಕೆಲ ದಿನಗಳ ಹಿಂದೆ ಕುಮಾರಿ ಆನೆಯ ಬಲಗಾಲಿಗೆ ಗಾಯವಾಗಿದೆ. ತಕ್ಷಣ ವೈದ್ಯರ ತಂಡ ಕುಮಾರಿ ಆನೆಗೆ ಔಷಧ ಸಿದ್ದಪಡಿಸಿ ಹಚ್ಚಲಾಗಿತ್ತು. ಆದರೆ ಗಾಯದ ಸ್ಥಳದಲ್ಲಿ ಔಷಧಿ ನಿಂತಿಲ್ಲ. ಔಷಧಿ ಮಣ್ಣು ಪಾಲಾಗುತಿತ್ತು. ಇದರಿಂದ ಆನೆಯ ಕಾಲಿನ ಗಾಯ ವಾಸಿಯಾಗಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಆನೆಯ ಕಾಲಿಗೆ ಔಷಧಿಯನ್ನು ಹಚ್ಚಲು ಸಾಧ್ಯವಾಗಿಲ್ಲ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೈದ್ಯರಾಗಿರುವ ಡಾ ರಮೇಶ್ ಹೊಸ ಚಿಕಿತ್ಸಾ ವಿಧಾನ ಕಂಡು ಹಿಡಿದಿದ್ದಾರೆ. ಆನೆಗಾಗಿ ವಿಶೇಷ ಪಾದರಕ್ಷೆಯನ್ನು ತಯಾರಿಸಿದ್ದಾರೆ. ವಾಹನದ ಟೈರ್ ಬಳಸಿಕೊಂಡು ಪಾದರಕ್ಷೆಯೊಂದನ್ನು ತಯಾರಿಸಿದ್ದಾರೆ. ನಂತರ ಔಷಧಿಯನ್ನು ಪಾದರಕ್ಷೆಗೆ ಹಚ್ಚಿ ಕುಮಾರಿ ಆನೆಯ ಕಾಲಿಗೆ ಅಳವಡಿಸಿದ್ದಾರೆ. ಡಾ ರಮೇಶ್ ಪ್ರಯತ್ನ ಯಶಸ್ವಿಯಾಗಿದೆ. ಔಷಧಿಯ ಪರಿಣಾಮ ಕುಮಾರಿ ಆನೆಯ ಕಾಲಿಗ ಗಾಯ ವಾಸಿಯಾಗುತ್ತಿದೆ. ಕುಮಾರಿ ಆನೆ ನೋವು ಕಡಿಮೆಯಾಗಿದ್ದು ಮತ್ತೆ ಉತ್ಸಾಹದಿಂದ ಓಡಾಡುತ್ತಿದೆ.