ಹುಬ್ಬಳ್ಳಿ,ಸೆ 09 (DaijiworldNews/AK):ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿದಾಗ ಅವರು ನನ್ನ ಮೇಲೆ ಸಿಟ್ಟಾಗಿದ್ದರು. ಜನತಾ ದಳ ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿರುವ ಪಕ್ಷ ಕೋಮುವಾದಿಗಳ ಜೊತೆ ಒಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅವರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ದೇವೇಗೌಡರು ಯಾವ ಕಾರಣಕ್ಕೂ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಸೇರಿಕೊಳ್ಳುತ್ತಿರುವುದಾಗಿ ಶಾಸಕ ಜಿ.ಟಿ.ದೇವೇಗೌಡರು ಹೇಳಿರುವುದು, ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ ಎಂದು ತೋರಿಸುತ್ತದೆ. ಅಧಿಕಾರಕ್ಕಾಗಿ ಯಾವುದೇ ಕ್ರಮಕ್ಕೆ ಸಿದ್ಧ ಎಂಬುದನ್ನು ಅವರು ತೋರಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿ ಸಿಎಂ, ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಯ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ರೈತರ ತೊಂದರೆಯನ್ನು ನೀಗಿಸಲು, ವಿದ್ಯುತ್ ನ್ನು ಹೊರಗಿನಿಂದ ಖರೀದಿಸಿ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಗೆ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಬಗ್ಗೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ಅಧಿಕೃತವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾಗಿದ್ದು, ಅವರನ್ನು ಜಿ20 ಸಭೆ ಆಹ್ವಾನಿಸದಿರುವುದು ತಪ್ಪು ಎಂದು ತಿಳಿಸಿದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಇದುವರೆಗೆ ಯಾವುದೇ ಉತ್ತರ ಬಂದಿರುವುದಿಲ್ಲ ಎಂದರು.