ನವದೆಹಲಿ, ,ಸೆ 09 (DaijiworldNews/AK):ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಭಾರತದ ಆಂತರಿಕ ಮತ್ತು ಬಾಹ್ಯ ಕ್ಷೇತ್ರವನ್ನು ಪ್ರತಿನಿಧಿಸುವ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಎರಡು ದಿನಗಳ ಕಾಲದ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಮಾನವೀಯತೆ ನೆಲೆಯೊಂದಿಗೆ ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಇದನ್ನು ಸಾಕಾರಗೊಳಿಸಲು ನಾವು ಎಲ್ಲರ ಜತೆಗೂಡಿ, ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದ ಮೂಲಕ ಸಾಧ್ಯವಾಗಲಿದೆ ಎಂದು ಪ್ರಧಾನಿ ಹೇಳಿದರು
ಜಗತ್ತು ವಿಶ್ವಾಸದ ಕೊರತೆಯನ್ನು ಕೋವಿಡ್ ಸಂದರ್ಭದಲ್ಲಿ ಎದುರಿಸಿತ್ತು. ಬಳಿಕ ಉಕ್ರೇನ್ ಯುದ್ಧದಿಂದಾಗಿ ಅದು ಇನ್ನಷ್ಟು ಹೆಚ್ಚಾಯಿತು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಜಾಗತಿಕ ಒಳಿತಿಗಾಗಿ ಹೆಜ್ಜೆಹಾಕಬೇಕಾಗಿದೆ. ಅದಕ್ಕಾಗಿ ಜಾಗತಿಕ ವಿಶ್ವಾಸದ ಕೊರತೆಯನ್ನು ಬಾಂಧವ್ಯದ ವಿಶ್ವಾಸದ ಮೂಲಕ ಜೋಡಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿ20 ಶೃಂಗಸಭೆಯ ಅಧ್ಯಕ್ಷತೆ ಭಾಷಣಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಮೊರೊಕ್ಕೊದಲ್ಲಿ ಸಂಭವಿಸಿದ ಭೀಕರ ಭೂಕಂಪ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಗಾಯಗೊಂಡವರು ಎಲ್ಲರೂ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ ಎಂದರು.