ಬೆಂಗಳೂರು, ಸೆ. 11 (DaijiworldNews/AK): ತಮ್ಮತ್ತ ಮತ್ತು ತಮ್ಮ ತಳ ಸಮುದಾಯದತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗಿಯೂ ನೋಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಸಮಾಧ ವ್ಯಕ್ತಪಡಿಸಿದ್ದರು.
ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
ಹೈಕಮಾಂಡ್ ನಾಯಕರಿಂದ ಬಿಕೆ ಹರಿಪ್ರಸಾದ್ ರನ್ನು ಸಮಾಧಾನಪಡಿಸುವ ಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ವಿರುದ್ಧದ ವಾಗ್ದಾಳಿಗೆ ಸಂಬಂಧಿಸಿ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ಬಿಕೆ ಹರಿಪ್ರಸಾದ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸಲು ಸಮಯ ಕೊಡಿ. ನಿಮ್ಮ ಬೇಡಿಕೆಗಳನ್ನು ಸಮಯ ಬಂದಾಗ ಸರಿಪಡಿಸುತ್ತೇವೆ ಎಂದು ಹರಿಪ್ರಸಾದ್ ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅದಕ್ಕೂ ಮೊದಲು ಬಿಕೆ ಹರಿಪ್ರಸಾದರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕರುಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಸಿ ವೇಣುಗೋಪಾಲ ಸಂಪರ್ಕ ಮಾಡಿದ್ದಾರೆ. ಆದರೆ, ಸುರ್ಜೆವಾಲಾ-ವೇಣುಗೋಪಾಲ್ ದೂರವಾಣಿ ಕರೆಗೆ ಬಿಕೆ ಹರಿಪ್ರಸಾದ್ ಸ್ಪಂದಿಸಿಲ್ಲ ಎನ್ನಲಾಗಿದೆ.
ಇಬ್ಬರು ನಾಯಕರಿಗೂ ಕೇರ್ ಮಾಡದ ಹಿನ್ನೆಲೆ ನೇರವಾಗಿ ಎಐಸಿಸಿ ಅಧ್ಯಕ್ಷರಿಂದಲೇ ಕರೆ ಹೋಗಿದೆ. ಹರಿ ಪ್ರಸಾದ್ ಅವರು ಮಲ್ಲಿಕಾರ್ಜುನ ಖರ್ಗೆ ಜೊತೆಗೆ ತಮ್ಮ ಅಸಮಾಧಾನದ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.