ಬೆಂಗಳೂರು, ಸೆ 13 (DaijiworldNews/AK): ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದ ಹಿನ್ನಲೆ ಸಿದ್ದರಾಮಯ್ಯ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹರಿಪ್ರಸಾದ್ ಹೇಳಿಕೆಯಿಂದ ಪಕ್ಷಕ್ಕೆ ಇರಿಸು ಮುರಿಸು ಉಂಟಾಗುತ್ತಿದ್ದಂತೆಯೇ ಅಲರ್ಟ್ ಆದ ಹೈಕಮಾಂಡ್ ಶೋಕಾಸ್ ನೋಟಿಸ್ ಜಾರಿಮಾಡಿದೆ. ಹತ್ತು ದಿನಗಳಲ್ಲಿ ಉತ್ತರಿಸುವಂತೆ ಬಂದಿರುವ ನೋಟಿಸ್ಗೆ ಇದೀಗ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ನೋಟಿಸ್ ಅಧಿಕೃತವಾಗಿ ನನ್ನ ಕೈಗೆ ಸಿಕ್ಕಾಗ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಹರಿಪ್ರಸಾದ್, ನೋಟಿಸ್ ಬಗ್ಗೆ ವಾಟ್ಸಾಪ್ನಲ್ಲಿ ನೋಡಿದೆ. ಇಂದು ಕಾಪಿ ಬರಬಹುದು. ನೋಟಿಸ್ ನನಗೂ ಪಕ್ಷಕ್ಕೂ ಇರುವ ಸಂಬಂಧ. ನೋಟಿಸ್ ಅಧಿಕೃತವಾಗಿ ನನ್ನ ಕೈಗೆ ಸಿಕ್ಕಿದಾಗ ಉತ್ತರ ಕೊಡುತ್ತೇನೆ. 10 ದಿನ ಸಮಯ ಕೊಟ್ಟಿದ್ದಾರೆಂದು ಗೊತ್ತಾಗಿದೆ. ಎಐಸಿಸಿಗೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.