ಉತ್ತರ ಪ್ರದೇಶ,ಏ 11 (MSP): ಇಲ್ಲಿನ ಕೋಮು ಸೂಕ್ಷ್ಮ ಕ್ಷೇತ್ರವಾದ ಮುಜಪ್ಫರನಗರದ ಬಿಜೆಪಿ ಅಭ್ಯರ್ಥಿ ಸಂಜೀವ್ ಬಲ್ಯಾನ್ ’ಬುರ್ಖಾಧಾರಿ ಮಹಿಳೆಯರಿಂದ ನಕಲಿ ಮತದಾನದ ’ ಆತಂಕ ವ್ಯಕ್ತಪಡಿಸಿದ್ದಾರೆ.
’ತಮ್ಮ ಕ್ಷೇತ್ರದಲ್ಲಿ ಬುರ್ಖಾಧಾರಿಗಳಿಂದ ನಕಲಿ ಮತದಾನವಾಗುವ ಆತಂಕ ನನಗಿದೆ, ಮುಜಪ್ಫರನಗರ ಕ್ಷೇತ್ರದಲ್ಲಿ ಬುರ್ಖಾಧಾರಿ ಮಹಿಳೆಯರ ಮುಖವನ್ನು ಪರಿಶೀಲನೆ ಮಾಡದೇ ಓಟು ಹಾಕಲು ಅವಕಾಶ ನೀಡಲಾಗುತ್ತಿದೆ. ಹೀಗಾಗಿ ನಕಲಿ ಮತದಾನವಾಗುತ್ತಿದೆ ಎಂಬ ಸಂಶಯವಿದೆ’ಎಂದು ಅವರು ಆರೋಪ ಮಾಡಿದ್ದಾರೆ.
ಮೊದಲ ಹಂತದ ಮತದಾನ ಗುರುವಾರ ನಡೆಯುತ್ತಿದ್ದು, ಅವರು ತಮ್ಮ ಮತ ಚಲಾಯಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, " ಕ್ಷೇತ್ರದಲ್ಲಿ ಬುರ್ಖಾಧಾರಿ ಮಹಿಳೆಯರ ಮುಖ ಪರಿಶೀಲಿಸದೇ ಮತ ಚಲಾಯಿಸಲು ಅವಕಾಶ ನೀಡಲಾಗುತ್ತಿದೆ. ನಕಲಿ ಮತದಾನವಾಗುತ್ತಿದೆ ಎಂದು ನಾನು ಆರೋಪ ಮಾಡುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ತಕ್ಷಣ ಗಮನ ಹರಿಸದಿದ್ದರೆ ಹೋದರೆ ಮರುಮತದಾನ ಮಾಡಲು ನಾನು ಒತ್ತಾಯಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.
2013ರಲ್ಲಿ ಇಲ್ಲಿ ಉಂಟಾಗಿದ್ದ ಕೋಮುಸಂಘರ್ಷದಿಂದ 6 ಜನ ಸಾವನಪ್ಪಿದ್ದರು. 50 ಸಾವಿರ ಮಂದಿ ಮನೆ ಮಠ ಕಳೆದುಕೊಂಡಿದ್ದರು. ಆ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ್ ಬಲ್ಯಾನ್ 4 ಲಕ್ಷ ಮತಗಳ ಅಂತರದಲ್ಲಿ ಜಯ ಗಳಿಸಿದ್ದರು.