ಅಮರಾವತಿ, ಏ 11 (MSP): ದೇಶದ ಹಲವು ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಪ್ರಕಿಯೆ ಪ್ರಾರಂಭವಾಗಿದ್ದು, ಈ ಮೂಲಕ 2019ರ ಲೋಕಸಭೆ ಚುನಾವಣೆಗೆ ಅಧಿಕೃತ ಪ್ರಾರಂಭ ಸಿಕ್ಕಂತಾಗಿದೆ. ಈ ಮಧ್ಯೆ ಆಂಧ್ರದಲ್ಲಿ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸ್ಥಾಪಿತ ಜನಸೇನಾ ಪಕ್ಷದ ಎಂಎಲ್ಎ ಅಭ್ಯರ್ಥಿ ಮಧುಸೂಧನ್ ಗುಪ್ತಾ ಮತಗಟ್ಟೆಯಲ್ಲಿ ಇಟ್ಟಿದ್ದ ಇವಿಎಂ ಮತಯಂತ್ರವನ್ನು ನೆಲಕ್ಕೆ ಎಸೆದು ಪುಡಿಗೈದಿದ್ದಾರೆ.
ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಹಾಗೂ 175 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಏಕಕಾಲಕ್ಕೆ ಮತದಾನ ನಡೆಯುತ್ತಿದೆ. ಈ ಸಂದರ್ಭ ಅನಂತಪುರ ಜಿಲ್ಲೆಯ ಗುಂತಕಲ್ ವಿಧಾನಸಭೆ ಕ್ಷೇತ್ರದ ಗುತ್ತಿ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಲು ಬಂದ ಮಧುಸೂಧನ್ ಗುಪ್ತಾ ಈ ಕೃತ್ಯ ಎಸಗಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಸರಿಯಿಲ್ಲ, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಹೆಸರುಗಳು ಇವಿಎಂನಲ್ಲಿ ಸರಿಯಾಗಿ ಕಾಣಿಸುತ್ತಿಲ್ಲ ಎಂದು ಆಕ್ಷೇಪಿಸಿ ಗುಪ್ತಾ ಚುನಾವಣಾಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಗುಪ್ತಾ ಆರೋಪವನ್ನು ನಿರಾಕರಿಸಿದ ಅಧಿಕಾರಿಗಳು, ಮತ ಹಾಕಿ ತೆರಳುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಮಧುಸೂದನ್ ಗುಪ್ತಾ ವಿದ್ಯುನ್ಮಾನ ಮತಯಂತ್ರವನ್ನು ನೆಲಕ್ಕೆ ಎಸೆದರು. ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದಾರೆ.