ಮೈಸೂರು, ಸೆ 16 (DaijiworldNews/HR): ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯ ರೈತರ ಹಿತ ಬೇಕಾಗಿಲ್ಲ. ಸ್ಟಾಲಿನ್ ಅವರ ಡಿಎಂಕೆ ಜೊತೆ ಮೈತ್ರಿ ಮುಖ್ಯ. ತಮಿಳುನಾಡಿಗೆ ನೀರು ಬಿಡಬೇಡಿ, ವಾಸ್ತವ ಸ್ಥಿತಿಯನ್ನು ಕೋರ್ಟ್ ಮುಂದಿಡಿ ಎಂದು ಸರ್ಕಾರಕ್ಕೆ ನಾನು ಹೇಳಿದ್ದೆ. ಸಭೆಯಲ್ಲಿಯೂ ಅದನ್ನೇ ಹೇಳಿದ್ದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಸ್ಟಾಲಿನ್ ಜೊತೆ ಒಳ್ಳೆಯ ನಂಟಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಲುವಾಗಿ ರಾಜ್ಯದ ರೈತರ ಹಿತ ಹಾಳು ಮಾಡುತ್ತಿದ್ದಾರೆ. ರಾಜ್ಯದ ಜನ 135 ಸೀಟು ಕೊಟ್ಟಿದ್ದಾರೆ. ಇನ್ನು ಐದು ವರ್ಷ ಯಾರು ಏನು ಮಾಡಲಾಗದು ಎಂದುಕೊಂಡಿದ್ದಾರೆ ಎಂದರು.
ಇನ್ನು ಇದೇ ರೀತಿ ನೀರು ಬಿಟ್ಟರೆ ಬೆಂಗಳೂರು ಮೈಸೂರು ಮಂಡ್ಯ ಎಲ್ಲಾ ಕಡೆ ಕುಡಿಯುವ ನೀರಿಗೂ ಹಾಹಾಕಾರ ಬರುತ್ತದೆ. ರಾಜ್ಯಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.