ಬೆಂಗಳೂರು, ಸೆ 18 (DaijiworldNews/MS): "ನಾವು ನಮ್ಮ ಜನರನ್ನು ಕಾಪಾಡಲೇ ಬೇಕು. ಹೀಗಾಗಿ ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು "ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇಂದು ನಡೆಯಲಿದ್ದು, ಅಲ್ಲಿ ನಮ್ಮ ವಾದ ಮಂಡಿಸುತ್ತೇವೆ. ಮಳೆಯಿಲ್ಲದೆ ತುಂಬಾ ಸಂಕಷ್ಟದಲ್ಲಿ ಇದ್ದೇವೆ ಎಂದು ಮನವರಿಕೆ ಮಾಡುತ್ತೇವೆ. ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲೂ ಮನವಿ ಮಾಡುತ್ತೇವೆ" ಎಂದು ತಿಳಿಸಿದರು.
ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಈಗಾಗಲೇ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇವೆ. ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಬರೆದ ಪತ್ರವನ್ನು ತಲುಪಿಸಿದ್ದೇವೆ. ನೀವು ಶೀಘ್ರ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಮನವಿ ಮಾಡಿದ್ದೇನೆ."
ಸಂಸತ್ ಅಧಿವೇಶನ ನಡೆಯುತ್ತಿದ್ದು, ರಾಜ್ಯದ ಸಂಸದರನ್ನು ಭೇಟಿ ಮಾಡುವ ಆಲೋಚನೆ ಇದೆ. ಸರ್ವಪಕ್ಷ ಸಭೆಗೆ ಪ್ರಧಾನಿಗಳು ಸಮಯ ಕೊಟ್ಟಿಲ್ಲ. ತಮಿಳುನಾಡಿನವರು ಅವರದ್ದೇ ಆದ ವಾದಗಳನ್ನು ಮಂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮಾಡೆಲ್ ದೇಶಕ್ಕೆ ಮಾದರಿ
ಕರ್ನಾಟಕದಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ ಯಶಸ್ವಿಯಾಗಿದ್ದೇವೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ದೇಶಕ್ಕೆ ಮಾದರಿಯಾಗಿದೆ, ತೆಲಂಗಾಣ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಕರ್ನಾಟಕ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಮಾದರಿಯಾಗಲಿವೆ.
ಇದೇ ವೇಳೆ ರಾಜ್ಯದ ಜನರಿಗೆ ಹಬ್ಬದ ಶುಭಾಶಯ ತಿಳಿಸಿದ ಉಪಮುಖ್ಯಮಂತ್ರಿಗಳು "ರಾಜ್ಯಕ್ಕೆ ಒದಗಿ ಬಂದಿರುವ ಎಲ್ಲಾ ವಿಘ್ನ, ಸಂಕಷ್ಟಗಳು ನಿವಾರಣೆಯಾಗಲಿ" ಎಂದು ಪ್ರಾರ್ಥಿಸಿದರು.