ಹೊಸದಿಲ್ಲಿ, ಸೆ 20 (DaijiworldNews/AK): ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಪರ ನಿಲ್ಲುವುದಾಗಿ ಸರ್ವಪಕ್ಷಗಳ ಸಂಸದರು ಮಾತುಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ,ಕೆ,ಶಿವಕುಮಾರ್ ತಿಳಿಸಿದ್ದಾರೆ.
ಸರ್ವಪಕ್ಷ ಸಂಸದರ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು ಕಾವೇರಿ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ದನಿ ಎತ್ತುವುದಾಗಿ ಎಲ್ಲಾ ಸಂಸದರು ಭರವಸೆ ನೀಡಿದ್ದಾರೆ” ಎಂದರು.
ಮಳೆ ಕಡಿಮೆ ಬಿದ್ದಾಗ ನೀರನ್ನು ಎಷ್ಟು ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸರಿಯಾದ ಸೂತ್ರ ಹಂಚಿಕೆ ಮಾಡಿಲ್ಲ. 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ ಎಂದು ನೀರು ಬಿಡುಗಡೆಗೆ ಆದೇಶ ನೀಡಿದ್ದು ಇಷ್ಟೆಲ್ಲಾ ಸಂಕಷ್ಟಗಳಿಗೆ ದಾರಿ ಮಾಡಿಕೊಟ್ಟಿದೆ" ಎಂದರು.
"ರಾಜ್ಯದ ನೆಲ- ಜಲದ ಸಂರಕ್ಷಣೆ ಸದಾ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ಸಭೆಗೆ ಬಂದಿದ್ದಂತಹ ಬಿಜೆಪಿ, ಕಾಂಗ್ರೆಸ್, ಜನತದಳದ ಮತ್ತು ಪಕ್ಷೇತರ ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಸದಸ್ಯರಿಗೆ ಕರ್ನಾಟಕ ಸರ್ಕಾರ ಅಭಾರಿಯಾಗಿರುತ್ತದೆ" ಎಂದು ಡಿಸಿಎಂ ಹೇಳಿದರು.