ವಿಜಯಪುರ, ಸೆ 25(DaijiworldNews/AK): ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಲು ತಯಾರಿಲ್ಲ. ಕಾವೇರಿ ನೀರನ್ನು ಅವ್ಯಾಹತವಾಗಿ ಬಿಡುತ್ತಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಚಿಂತನೆಯೇ ಇಲ್ಲ. ಅವರು ಕೇವಲ ಒಬ್ಬ ಜೋಕರ್ನನ್ನು ಪ್ರಧಾನಮಂತ್ರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಜೋಕರ್ಗೆ ಹೋಲಿಸಿದ್ದಾರೆ.
ರಾಹುಲ್ ಗಾಂಧಿ ಅಂದರೆ ಇಂಟರ್ನ್ಯಾಶನಲ್ ಜೋಕರ್ ಇದ್ದಂತೆ. ಅಂಥವರನ್ನು ಪ್ರಧಾನಮಂತ್ರಿ ಮಾಡಲು ಇಂದು ನಮ್ಮ ರಾಜ್ಯವನ್ನು ಬಲಿ ಕೊಡುತ್ತಿದ್ದಾರೆ.
ಬರಗಾಲ ಘೋಷಣೆ ಮಾಡಬೇಕಲ್ಲಾ? ನಾನು ಮೊನ್ನೆ ರಾಯಚೂರು ಜಿಲ್ಲೆಗೆ ಹೋಗಿದ್ದೆ. ತಿಂಥಣಿ ಬ್ರಿಜ್ನಲ್ಲಿ ಪಕ್ಷಿಗಳಿಗೂ ಸಹ ಕುಡಿಯಲು ನೀರಿಲ್ಲ. ಅಷ್ಟು ಭಯಾನಕ ಬರಗಾಲವಿದೆ. ರೈತರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಸಿಗುತ್ತಿಲ್ಲ. ರೈತರ ಪಂಪ್ಸೆಟ್ಗಳು ಬಂದ್ ಆಗಿವೆ. ಮೂರು ತಾಸು, ಎರಡೂವರೆ ತಾಸು ವಿದ್ಯುತ್, ಅದೂ ರಾತ್ರಿ ಕೊಡುತ್ತಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.