ವಯನಾಡ್,ಏ 12(MSP): ಲೋಕಸಭಾ ಚುನಾವಣೆಗೆ ಸನಿಹ ಬರುತ್ತಿದ್ದಂತೆ, ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಮಂಡ್ಯದ ಮಾಜಿ ಸಂಸದೆ ರಮ್ಯ ಮಂಡ್ಯದ ಕಡೆ ತಿರುಗಿಯೂ ತಲೆ ಹಾಕದೆ ಇದೀಗ ವಯನಾಡ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಯಾವೊಬ್ಬ ಕಾಂಗ್ರೆಸ್ ಅಭ್ಯರ್ಥಿ ಪರವೂ ಪ್ರಚಾರಕ್ಕೆ ಬಾರದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು, ಸದ್ಯ ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಕಳೆದ ಬಾರಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೂ ಬಾರದ ರಮ್ಯಾ ಮತದಾನದಿಂದಲೂ ದೂರ ಉಳಿದಿದ್ದರು. ಅಲ್ಲಿನ ಜನತೆ ಊರಿಗೆ ಬರುವಂತೆ ಬಾಗಿನ ಕಳುಹಿಸಿಕೊಟ್ಟಿರುವುದು ಹಳೆ ವಿಚಾರ. ಇನ್ನು ರಾಜಕೀಯವಾಗಿ ರಮ್ಯ ಬೆನ್ನಿಗೆ ನಿಂತ ಹಿರಿಯ ನಟ ಅಂಬರೀಷ್ ಪಾರ್ಥೀವ ಶರೀರದ ದರ್ಶನಕ್ಕೂ ರಮ್ಯಾ ಆಗಮಿಸಿರಲಿಲ್ಲ. ಇತ್ತ ಕಡೆ ಚುನಾವಣೆಯ ದಿನಾಂಕ ಹತ್ತಿರ ಬಂದರೂ ರಮ್ಯಾ ಮಾತ್ರ ಕರ್ನಾಟಕದ ಕಡೆ ತಲೆ ಹಾಕಿರಲಿಲ್ಲ.
ಆದರೆ ಊರಿಗೆ ಬಾರದ ಪದ್ಮಾವತಿ ಮಾತ್ರ ವಯನಾಡ್ ನಲ್ಲಿ ಇದೀಗ ಪ್ರತ್ಯಕ್ಷರಾಗಿದ್ದಾರೆ. ರಾಹುಲ್ ಗೆಲುವಿಗಾಗಿ ಟೊಂಕಕಟ್ಟಿ ನಿಂತಿರುವ ರಮ್ಯ ವಯನಾಡಿನಲ್ಲಿ ಸೋಷಿಯಲ್ ಮೀಡಿಯಾ ಟೀಮ್ ಜೊತೆ ಫುಲ್ ಬ್ಯುಸಿಯಾಗಿದ್ದಾರೆ. ವಯನಾಡಿನಲ್ಲಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಟೀಂ ಜೊತೆಯಲ್ಲಿ ಠಿಕಾಣಿ ಹೂಡಿರುವ ರಮ್ಯಾ, ತಂಡದೊಂದಿಗೆ ಮೀಟಿಂಗ್ ಮೇಲೆ ಮೀಟಿಂಗ್, ಚರ್ಚೆ ಮಾಡುವಲ್ಲಿ ರಾಹುಲ್ ಗೆಲುವಿಗಾಗಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.