ಬೆಂಗಳೂರು, ಅ 01 (DaijiworldNews/AK):ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್ ನಲ್ಲಿ ಹೆಚ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು ಎಂದರು
ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು ನೀವೆಲ್ಲಾ ಎಷ್ಟು ವರ್ಷ ಬದುಕುತ್ತೀವಿ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಪದ್ಮಶ್ರೀ ಪುರಸ್ಕೃತ ಶ್ರೀ ಹರೇಕಳ ಹಾಜಪ್ಪ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲ್, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್.ಗಿರಿರಾಜ್ ಎಲ್ಲರೂ ನಮಗೆ ಮಾದರಿ ಮತ್ತು ಮಾರ್ಗದರ್ಶಕರು. ಇವರ ಬದುಕಿನ ಮೌಲ್ಯಗಳು ಸಮಾಜವನ್ನು ಬೆಳಗುತ್ತವೆ ಎಂದು ಮೆಚ್ಚುಗೆ ಸೂಚಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.