ಬೆಂಗಳೂರು, 05 (DaijiworldNews/AK):ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ,ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಮುಖ್ಯ ಮಂತ್ರಿಗಳು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.
ಹೊಸ ಮರಳು ನೀತಿ 2020 ನ್ನು 1.12.2021 ರಂದು ಜಾರಿಗೆ ತಂದಿದ್ದು, ಸಣ್ಣ ಬ್ಲಾಕ್ ಗಳಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿ ಯನ್ನೂ ಕಾಪಾಡಬೇಕಿದೆ.
ಈ ವೇಳೆ ಕಾರ್ಮಿಕರಿಗೆ ಸಮಸ್ಯೆಯಾಗದಂತೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು.
Non CRZ ಪ್ರದೇಶದಲ್ಲಿ ಟೆಂಡರ್ ಕಂ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು 39 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಬ್ಲಾಕ್ ಗಳ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿದ್ದು, 30 ಮರಳು ಬ್ಲಾಕ್ ಗಳಿಗ ಮರು ಹಾರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಭೆಗೆ ಮಾಹಿತಿ ಒದಗಿಸಿದರು.
8 ಲಕ್ಷ ಟನ್ ಮರಳು ಅಗತ್ಯವಿದೆ. ಜೆಲ್ಲಿ, ಕೆಂಪುಕಲ್ಲಿನ ಸಮಸ್ಯೆ ಇದೆ.ಮಂಗಳೂರು, ಉಡುಪಿಯಲ್ಲಿನ ಹವಾಗುಣಕ್ಕಾಗಿ ಗೃಹನಿರ್ಮಾಣಕ್ಕೆ ಬಳಕೆಯಾಗುತ್ತದೆ. ಇದರಲ್ಲಿ ಬಾಕ್ಸೈಟ್ ಇದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ಇದನ್ನು ಬಳಸುತ್ತವೆ. ಜಿಲ್ಲೆಯಿಂದ ಹೊರಗೆ ಕಳಿಸುವುದು ಬೇಡ ಎಂಬ ಅಭಿಪ್ರಾಯ ಜನರಲ್ಲಿದೆ.ಮರಳು ಗಣಿಗಾರಿಕೆಗೆ ಪರವಾನಗಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪರವಾನಗಿ ನೀಡಲಿ. ಮನೆ ಕಟ್ಟಲು ಅಗತ್ಯವಿರುವ ಸೈಜುಗಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಲ್ಯಾಟರೈಟ್ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಮಾಡಲಾಗಿರುವ ತಿದ್ದುಪಡಿಯನ್ನು ಪುನಃ ತಿದ್ದುಪಡಿ ಮಾಡಿ ವಾಹನಗಳಿಗೆ ಅನುಮತಿ ನೀಡಬಹುದು. ಕ್ರಶಿಂಗ್ ಮಾಡಲಾದ ಮಣ್ಣನ್ನು ಜಿಲ್ಲೆಯೊಳಗಿನ ಬಳಕೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ 9 ಡಯಾಲಿಸಿಸ್ ಯಂತ್ರಗಳು ಕೆಟ್ಟಿದೆ. ಒಂದೇ ಯಂತ್ರ ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಕೂಡಲೇ ವೇತನ ನೀಡುವಂತೆ ಸಿಎಂ ಸೂಚಿಸಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಲಾರಿ ಮಾಲೀಕರು ಪ್ರತಿಭಟನೆ ಹಿಂಪಡೆದಿದ್ದಾರೆ.ದಾಯ್ಜಿವರ್ಲ್ಡ್ ಜತೆ ಮಾತನಾಡಿದ ಲಾರಿ ಮಾಲೀಕರ ಸಂಘದ ಮುಖಂಡ ರಾಘವೇಂದ್ರ ಶೆಟ್ಟಿ, ‘ನಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಅವರೇ ಹಲವು ಸಲಹೆಗಳನ್ನು ನೀಡಿದ್ದಾರೆ. ಮರಳಿಗೆ ಮರು ಟೆಂಡರ್ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಗಣಿಗಾರಿಕೆ ಮತ್ತು 30 ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಿ. ನಮ್ಮ ಎಲ್ಲಾ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಪರಿಹರಿಸಿದ್ದಾರೆ. ನಾವು ನಮ್ಮ ಮುಷ್ಕರವನ್ನು ಹಿಂಪಡೆದು ಅಕ್ಟೋಬರ್ 06 ರಿಂದ ವ್ಯವಹಾರಕ್ಕೆ ಮರಳುತ್ತೇವೆ ಎಂದರು.
ಸಭೆಯಲ್ಲಿ ಲಾರಿ ಮಾಲೀಕರ ಸಂಘದ ಪ್ರತಿನಿಧಿಯಾಗಿ ರಾಘವೇಂದ್ರ ಶೆಟ್ಟಿ ಭಾಗವಹಿಸಿದ್ದರು.