ಮುಂಬೈ, ಅ 06 (DaijiworldNews/AK): ಮುಂಬೈ ವಠಾರದಿಂದ ಪ್ರಯಾಣ ಆರಂಭಿಸಿದ್ದ ದೇಶದ ಮತ್ತೊಬ್ಬ ಸಾಧಕ. ಅವರೇ ಎಚ್ಟಿ ಪಾರೇಖ್. ಎಚ್ಡಿಎಫ್ಸಿ ಸಂಸ್ಥಾಪಕರಾದ ಎಚ್ಟಿ ಪಾರೇಖ್ ಅವರ ಬಗ್ಗೆ ಗೊತ್ತಾ? ಒಂದೆರಡಲ್ಲ ಬರೋಬ್ಬರಿ 4,14,000 ಕೋಟಿ ರೂಪಾಯಿಗಳ ಕಂಪನಿಯನ್ನು ಕಟ್ಟಿದ ಇವರ ಸಾಧನೆಯ ಕಥೆಯು ಎಲ್ಲರಿಗೂ ಸ್ಪೂರ್ತಿದಾಯಕ.
ಇವರ ಹೆಸರು ಹಸ್ಮುಖ್ ಠಾಕೋರ್ದಾಸ್ ಪಾರೇಖ್ . ಗುಜರಾತ್ನ ಸೂರತ್ನ ಜೈನ ಕುಟುಂಬದಲ್ಲಿ ಹುಟ್ಟಿದ್ದು. ಆರಂಭದಲ್ಲಿ ಇವರು ಮುಂಬೈನ ವಠಾರದಲ್ಲಿ ತಮ್ಮ ತಂದೆಯೊಂದಿಗೆ ವಾಸವಿದ್ದರು. ಅಲ್ಲಿಂದ ಆರಂಭವಾದ ಅವರ ಜೀವನ ಆರಂಭದಲ್ಲಿ ಕಷ್ಟಕರವೇ ಆಗಿತ್ತು.
ಅವರು ಪಾರ್ಟ್ ಟೈಂ ಕೆಲಸ ಮಾಡುತ್ತ ಕಾಲೇಜು ಶಿಕ್ಷಣವನ್ನು ಪಡೆದರು. ಪಾರೇಖ್ ಸೂರತ್ನ ಬ್ಯಾಂಕಿಂಗ್ ಕುಟುಂಬಕ್ಕೆ ಸೇರಿದವರಾಗಿದ್ದು, ಮುಂಬೈನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಯುಕೆಯಲ್ಲಿ ಹೆಚ್ಚಿನ ಅಧ್ಯಯನ ಮಾಡುವ ಅವಕಾಶವನ್ನು ಪಡೆದರು. ಅಲ್ಲಿ ಅವರು ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಬ್ಯಾಂಕಿಂಗ್ ಮತ್ತು ಫೈನಾನ್ಸ್ನಲ್ಲಿ ಬಿಎಸ್ಸಿ ಪದವಿ ಪಡೆದರು.
ಹಸ್ಮುಖ್ ಪಾರೇಖ್ ಭಾರತಕ್ಕೆ ಮರಳಿದರು ಮತ್ತು ಮುಂಬೈನ ಪ್ರಸಿದ್ಧ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದರು. ನಂತರ ಅವರು ಸ್ಟಾಕ್ ಬ್ರೋಕಿಂಗ್ ಸಂಸ್ಥೆ ಹರ್ಕಿಸಂದಾಸ್ ಲಖ್ಮಿದಾಸ್ಗೆ ಸೇರುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಐಸಿಐಸಿಐ ನಲ್ಲಿ ಅವರು ದೊಡ್ಡ ಸ್ಥಾನಕ್ಕೇರಿದರು. ಅಲ್ಲಿ ಅವರು 16 ವರ್ಷಗಳ ವೃತ್ತಿಜೀವನದ ನಂತರ ನಿವೃತ್ತರಾಗುವ ಮೊದಲು ಡೆಪ್ಯುಟಿ ಜನರಲ್ ಮ್ಯಾನೇಜರ್ನಿಂದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಏರಿದರು.
ನಿವೃತ್ತರಾಗುವ ವಯಸ್ಸಿನಲ್ಲಿ ಸಾಮಾನ್ಯ ಜನರು ವಿಶ್ರಾಂತಿ ಪಡೆದರೆ ಪಾರೇಖ್ ಅವರು ದೊಡ್ಡ ಸಾಧನೆಗೆ ಮುನ್ನಡಿ ಬರೆದರು. 66 ನೇ ವಯಸ್ಸಿನಲ್ಲಿ ಜನರು ನಿವೃತ್ತಿ ಬಯಸುವಾಗ ಪಾರೇಖ್ ಅವರು ಭಾರತದ ಮಧ್ಯಮ ವರ್ಗದ ಕನಸುಗಳಿಗೆ ಹಣಕಾಸು ಒದಗಿಸುವ ಅದ್ಭುತ ಕಲ್ಪನೆಯೊಂದಿಗೆ ಪುನರಾಗಮನ ಮಾಡಿದರು.ಅವರು 1977 ರಲ್ಲಿ ಹಣಕಾಸು ಸಂಸ್ಥೆಯಾಗಿ ಎಚ್ಡಿಎಫ್ಸಿ ಸ್ಥಾಪಿಸಿದರು. 1978 ರಲ್ಲಿ ಮೊದಲ ಗೃಹ ಸಾಲವನ್ನು ವಿತರಿಸಿದರು. ನಂತರದಲ್ಲಿ 1984ರ ಹೊತ್ತಿಗೆ, ಎಚ್ಡಿಎಫ್ಸಿ ರೂ 100 ಕೋಟಿಗಿಂತ ಹೆಚ್ಚಿನ ವಾರ್ಷಿಕ ಸಾಲವನ್ನು ಅನುಮೋದಿಸುತ್ತಿತ್ತು.
30 ವರ್ಷಗಳ ನಂತರ, ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನಗೊಂಡು 4.14 ಲಕ್ಷ ಕೋಟಿ ರೂಗಳ ಕಂಪನಿಯಾಗಿ ಬೆಳೆದಿದೆ.
ಹಸ್ಮುಖ್ ಠಾಕೋರ್ದಾಸ್ ಪಾರೇಖ್ ಅವರು ಭಾರತೀಯ ಹಣಕಾಸು ಉದ್ಯಮಿ, ಬರಹಗಾರ ಮತ್ತು ಲೋಕೋಪಕಾರಿ ಎಂದು ಹೆಸರಾಗಿದ್ದಾರೆ. ಇಂಡಸ್ಟ್ರಿಯಲ್ ಕ್ರೆಡಿಟ್ ಮತ್ತು ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾದ ಅಭಿವೃದ್ಧಿಯಲ್ಲಿ ಅವರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
ಭಾರತದಲ್ಲಿ ಹಣಕಾಸು ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ 1992 ರಲ್ಲಿ ಪಾರೇಖ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾಗೆಯೇ ಎಚ್ಟಿ ಪಾರೇಖ್ ಅವರ ಈ ಬಹುದೊಡ್ಡ ಸಾಧನೆ ಎಲ್ಲರಿಗೂ ಸ್ಪೂರ್ತಿಯಾಗುವುದಂತೂ ನಿಜ.