ಬೆಳಗಾವಿ, ಅ 06 (DaijiworldNews/HR): ಬೆಳೆ ಹಾನಿಯಾಗಿ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲವೆಂದು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲೂಕಿನ ಕಲಕೊಪ್ಪ ಗ್ರಾಮದ ಬಳಿ ನಡೆದಿದೆ.
ಅಪ್ಪಾಸಾಹೇಬ ಯಕ್ಕುಂಡಿ ಆತ್ಮಹತ್ಯೆಗೆ ಯತ್ನಿಸಿದ ರೈತ.
ಎರಡು ಕ್ರಿಮಿನಾಶಕ ಬಾಟಲಿ ತಂದಿದ್ದ ರೈತ ಅಪ್ಪಾಸಾಹೆಬ ಯಕ್ಕುಂಡಿ ಅವರು ಅಧಿಕಾರಿಗಳು ತನ್ನ ಸಮಸ್ಯೆ ಕೇಳಲಿಲ್ಲ ಎಂದು ಕೋಪಗೊಂಡು ಕ್ರಿಮಿನಾಶಕ ಸೇವಿಸಲು ಮುಂದಾಗಿದ್ದು ಇದನ್ನು ನೋಡಿದ ತಕ್ಷಣವೇ ಪೊಲೀಸರು ಬಾಟಲಿ ಕಸಿದುಕೊಂಡಿದ್ದಾರೆ.
40 ಎಕರೆ ಭೂಮಿಯಲ್ಲಿ ನಾನು ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇನೆ. ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ, ಯಾರೂ ರೈತರ ಕಷ್ಟ ಕೇಳುತ್ತಿಲ್ಲ. ಸರ್ಕಾರ ಯಾವ ಗ್ಯಾರಂಟಿ ನೀಡದ್ದರಿಂದ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದೆ ಎಂದು ರೈತ ತಿಳಿಸಿದ್ದಾರೆ.