ಮೈಸೂರು, ಅ 07 (DaijiworldNews/MS) : ಬಿಹಾರ ಸರ್ಕಾರ ಜಾತಿಗಣತಿಯನ್ನು ಸಾರ್ವಜನಿಕಗೊಳಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಬಿಡುಗಡೆ ಮಾಡುವಂತೆ ಒತ್ತಡ ಕೇಳಿಬರುತ್ತಿವೆ. ಹಲವು ರಾಜಕೀಯ ಮುಖಂಡರು 2015ರಲ್ಲಿ ನಡೆದ ಜನಗಣತಿಯ ಅಂಕಿ-ಅಂಶವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಇದೇ ವಿಚಾರಕ್ಕೆ ಮಾಧ್ಯಮಗಳ ಜೊತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ವರದಿ ಸಮಾಜಕ್ಕೆ ಮಾರಕವಲ್ಲ, ಸಮಾಜವನ್ನು ವಿಭಜಿಸೋದೂ ಇಲ್ಲ ನವೆಂಬರ್ ತಿಂಗಳಿನಲ್ಲಿ ಜಾತಿ ಗಣತಿ ವರದಿ ನನ್ನ ಕೈ ಸೇರಬಹುದು. ಎಂದು ಹೇಳಿದ್ದಾರೆ.
ಮೈಸೂರಿನ ಮಂಡಕಹಳ್ಳಿ ಏರ್ ಪೋರ್ಟ್ ನಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಅವರು, ಕಾಂತರಾಜು ಅಧ್ಯಕ್ಷರಾಗಿದ್ದಾಗ ಮುಖ್ಯಮಂತ್ರಿಯಾಗಿದ್ದಂತ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದ್ದರು. ಆದರೇ ಸಿಎಂ ಆಗಿದ್ದಂತ ಕುಮಾರಸ್ವಾಮಿ ಆ ವರದಿಯನ್ನು ಸ್ವೀಕರಿಸಿರಲಿಲ್ಲ. ಈಗ ಸಮಿತಿ ಅಧ್ಯಕ್ಷರು ಬದಲಾಗಿದ್ದಾರೆ. ಹೊಸ ಅಧ್ಯಕ್ಷರಿಗೆ ಕಾಂತರಾಜು ವರದಿಯನ್ನು ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಜಾತಿಗಣತಿ ಸಮಾಜಕ್ಕೆ ಮಾರಕವಲ್ಲ. ಅದು ಸಮಾಜವನ್ನು ವಿಭಜಿಸೋದು ಇಲ್ಲ. ಯಾವ ಸಮುದಾಯದವರು ಎಷ್ಟು ಇದ್ದಾರೆ ಎಂಬ ಅಂಕಿ ಅಂಶದ ಮಾಹಿತಿಯನ್ನು ನೀಡಲಿದೆ. ಆ ಅಂಕಿ ಅಂಶಗಳ ಆಧಾರದ ಮೇಲೆ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಮಾಡೋದಕ್ಕೆ ಇದು ಅವಶ್ಯಕವಾಗಲಿದೆ ಎಂದು ತಿಳಿಸಿದ್ದಾರೆ.