ಧಾರವಾಡ, ಅ 07 (DaijiworldNews/HR): ದೇಶದ್ರೋಹಿ ಚಟುವಟಿಕೆ ನಡೆಸಿದವರ ವಿರುದ್ಧ ದಾಖಲಾಗಿರುವ ಯಾವುದೇ ಪ್ರಕರಣ ಹಿಂಪಡೆದರೂ ತೀವ್ರ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತಪರ ಹೋರಾಟಗಾರರ ಅಥವಾ ಕನ್ನಡಪರ ಹೋರಾಟಗಾರರ ಕೇಸುಗಳನ್ನು ಹಿಂಪಡೆದಿದ್ದರೆ ನಮ್ಮದೇನು ಅಭ್ಯಂತರವಿರುತ್ತಿರಲಿಲ್ಲ. ನಮ್ಮ ಸರ್ಕಾರವಿದ್ದಾಗ ಇದನ್ನು ಮಾಡಿದ್ದೇವೆ. ಆದರೆ ರಾಜಕೀಯಕ್ಕೋಸ್ಕರ ಪೊಲೀಸರನ್ನು ಕೊಲೆ ಮಾಡಲು ಬಂದ, ಪೊಲೀಸ್ ಠಾಣೆ ಲೂಟಿ ಮಾಡಿದ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲೆ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುತ್ತಿರುವುದು ನಾಚಿಕೆಯಲ್ಲಿ ಸಂಗತಿ ಎಂದರು.
ಇನ್ನು ಕೋಲಾರ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಕೇಸು ಹಾಕಿಸಿಕೊಂಡವರು ಬಹಿರಂಗವಾಗಿ ಪೊಲೀಸರ ಮುಂದೆ ತಲ್ವಾರ್ ಸೇರಿದಂತೆ ಆಯುಧಗಳನ್ನು ಪ್ರದರ್ಶಿಸಿದ್ದಾರೆ. ಇದನ್ನು ನೋಡಿದರೆ ಜನರಲ್ಲಿ ಭಯ ಉಂಟಾಗುತ್ತದೆ. ಈ ರೀತಿ ಮಾಡುವ ಜನರಿಗೆ ಧೈರ್ಯ ಎಲ್ಲಿಂದ ಬರುತ್ತದೆ? ಎನ್ನುವುದೇ ಅರ್ಥವಾಗುವುದಿಲ್ಲ. ಅಷ್ಟರಮಟ್ಟಿಗೆ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.