ಕೋಲ್ಕತ, ಏ 13(MSP): ರಾಹುಲ್ ಗಾಂಧಿ ಅವರ ಸಿಲಿಗುರಿಯಲ್ಲಿ ಏ.೧೪ರಲ್ಲಿ ನಿಗದಿಯಾಗಿದ್ದ ಚುನಾವಣೆ ಪ್ರಚಾರ ಸಭೆ ರದ್ದಾಗಿದೆ. ಇದಕ್ಕೆ ಪ್ರಮುಖ ಕಾರಣ ಪಶ್ಚಿಮ ಬಂಗಾಳ ಸರ್ಕಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ಗೆ ಕೆಳಗಿಳಿಯಲು ಅನುಮತಿ ನಿರಾಕರಣೆ. ಈ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಸಿಲಿಗುರಿ ಕಾರ್ಯಕ್ರಮ ರದ್ದಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಮತ್ತು ಡಾರ್ಜಲಿಂಗ್ನ ಲೋಕಸಭೆ ಅಭ್ಯರ್ಥಿ ಶಂಕರ್ ಮಾಲಕರ್, ಪೊಲೀಸ್ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಸಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದೆವು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ವಿವರಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಲಿಗುರಿ ಪೊಲೀಸ್ ಮಹಾನಿರ್ದೇಶಕ ಬಿಎಲ್ ಮೀನಾ ಅವರು, ನಾವು ಪೊಲೀಸ್ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿಯಲು ಒಪ್ಪಿಗೆ ನಿರಾಕರಿಸಿರುವುದು ನಿಜ. ಆದರೆ ಪೊಲೀಸ್ ಮೈದಾನವನ್ನು ಬಿಟ್ಟು, ಕಾಂಗ್ರೆಸ್ ನವರು ಬೇರೆ ಬದಲಿ ಸ್ಥಳವನ್ನು ಯಾಕೆ ಗುರುತಿಸಲಿಲ್ಲ? ಕೆಲವು ನಿಯಮಗಳ ಹಿನ್ನೆಲೆ ನಾವು ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅನುಮತಿ ನೀಡಲಿಲ್ಲ. ಪೊಲೀಸ್ ಮೈದಾನ ಬಿಟ್ಟು ಬೇರೆ ಸ್ಥಳವನ್ನು ಆಯ್ದುಕೊಳ್ಳಬಹುದಿತ್ತಲ್ಲವೇ ಎಂದು ಮೀನಾ ಪ್ರಶ್ನಿಸಿದ್ದಾರೆ.