ಬೆಂಗಳೂರು, ಅ 08 (DaijiworldNews/AK): ಅತ್ತಿಬೆಲೆ ಬಾಲಾಜಿ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೆ ಎಚ್ಚತ್ತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇರುವ ಪಟಾಕಿ ಅಂಗಡಿಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ.
ಪಟಾಕಿ ಗೋಡೌನ್ ಅಗ್ನಿ ದುರಂತದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇನ್ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿ, ಎಸ್ಪಿ ಜತೆ ಮಾತನಾಡಿದ್ದೇನೆ. ಪಟಾಕಿ ಅಂಗಡಿಗಳನ್ನು ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ. ಘಟನೆ ಹೇಗಾಯ್ತು ಅಂತ ತನಿಖೆ ಮಾಡುತ್ತೇವೆ. ಪ್ರಾಣ ಕಳೆದುಕೊಂಡವರೆಲ್ಲ ಯುವಕರು ಇದ್ದಾರೆ.
ಅಗ್ನಿಶಾಮಕದಳ, ಎಫ್ಎಸ್ಎಲ್ ವರದಿ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಗೋಡೌನ್ ಮಾಲೀಕ, ಆತನ ಪುತ್ರ ಮತ್ತು ಜಾಗ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಡೆಯೂ ಪಟಾಕಿ ಗೋದಾಮು ಪರಿಶೀಲನೆ ಮಾಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಹೇಳಿದರು.
ನರಹತ್ಯೆ, ಕೊಲೆಯಲ್ಲದ ನರಹತ್ಯೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಘಟನೆ ಬಗ್ಗೆ ತಜ್ಞರು ವರದಿ ಕೊಡುತ್ತಾರೆ. 13 ಮೃತ ದೇಹಗಳ ಹೆಸರು ಗೊತ್ತಾಗಿದೆ. ಸಂಬಂಧಿಕರು ಬಂದು ನೋಡುತ್ತಿದ್ದಾರೆ. ಇದು ಬಹಳ ಕೆಟ್ಟ ದುರಂತ ಎಂದು ಹೇಳಿದರು.