ನವದೆಹಲಿ,ಅ 09 (DaijiworldNews/AK): ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ.
ತೆಲಂಗಾಣ, ಛತ್ತೀಸ್ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಈ ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಧ್ಯಪ್ರದೇಶ ಹಾಗೂ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ, ಛತ್ತೀಸ್ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ, ರಾಜಸ್ಥಾನದಲ್ಲಿ ನವೆಂಬರ್ 23ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.
ಎಲ್ಲಾ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ಕ್ಕೆ ಹೊರಬರಲಿದೆ.ಐದು ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ ಪುರುಷ ಮತದಾರರ ಸಂಖ್ಯೆ 8.24 ಕೋಟಿ ಮಹಿಳಾ ಮತದಾರರ ಸಂಖ್ಯೆ 7.88 ಕೋಟಿಯಷ್ಟಿದೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಸಂಖ್ಯೆ 60 ಲಕ್ಷವಿದೆ. ಅವರ ವಯಸ್ಸು 18 ರಿಂದ 19 ವರ್ಷಗಳು. 18 ವರ್ಷ ಪೂರ್ಣಗೊಳ್ಳಲಿರುವ 15.39 ಲಕ್ಷ ಮತದಾರರಿದ್ದು, ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಹೊಂದಿರಲಿದೆ, ಈ ಪೈಕಿ 8,192 ಮಹಿಳೆಯರೇ ನಿರ್ವಹಿಸಲಿದ್ದಾರೆ.ಮಧ್ಯಪ್ರದೇಶ 5.6 ಕೋಟಿ ರಾಜಸ್ಥಾನ 5.25 ಕೋಟಿ ತೆಲಂಗಾಣ 3.17 ಕೋಟಿ ಛತ್ತೀಸ್ಗಢ 2.03 ಕೋಟಿ ಮಿಜೋರಾಂ 8.52 ಲಕ್ಷ ಮತದಾರಿದ್ದಾರೆ ಎಂದು ತಿಳಿಸಿದರು.