ಬಾಗಲಕೋಟೆ, ಅ 11 (DaijiworldNews/MS): ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಶೀಘ್ರವೇ ಸ್ಪೋಟಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, . ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು , ಶಾಸಕರು ಒಗ್ಗಟ್ಟಿಲ್ಲದೆ ವಿಭಿನ್ನ ಹೇಳಿಕೆ ಕೊಡುತ್ತಿದ್ದು, ಈ ಸರ್ಕಾರದಲ್ಲಿ ಸಿಎಂ ನೇಮಕ ಪ್ರಕ್ರಿಯೆಯಿಂದಲೇ ಭಿನ್ನಾಭಿಪ್ರಾಯ ಶುರುವಾಗಿದೆ. ಸಿಎಂ ಆಯ್ಕೆ ವೇಳೆಯೇ ಸಿದ್ದರಾಮಯ್ಯ ಅವರು ತಮ್ಮನ್ನು ಸಿಎಂ ಮಾಡಲಿಲ್ಲ ಎಂದು ಕೋಪಗೊಂಡು ದೆಹಲಿಯಿಂದ ಮರಳಿ ಬರುತ್ತಿದ್ದರು. ನಂತರ ಸಿದ್ದರಾಮಯ್ಯ ಅವರಿಗೆ ಕರಾರು ಖಂಡಿಷನ್ ಹಾಕಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಸಿಎಂ ಎಂದು ಅನುಮಾನ ಬರುವ ರೀತಿಯಲ್ಲಿ ಅವರ ಸಂಪುಟದ ಹಿರಿಯ ಸಚಿವರೇ ಮಾತನಾಡಿದರು. ಇದೂವರೆಗೂ ಸಿದ್ದರಾಮಯ್ಯ ಸಹ 5 ವರ್ಷ ನಾನೇ ಸಿಎಂ ಅಂತ ಎಲ್ಲೂ ಹೇಳಿಲ್ಲ. ಏನಿದರರ್ಥ, ಏನು ಒಳಗಡೆ ನಡೆದಿದೆ ? ಇದು ರಾಜ್ಯದ ಜನತೆಗೆ ಗೊತ್ತಾಗಬೇಕು, ಇದು ಕಾಂಗ್ರೆಸ್ ಆಂತರಿಕ ವಿಷಯ ಅಲ್ಲ. ರಾಜ್ಯದ ಆಡಳಿತ ರಾಜ್ಯದ ಜನರಿಗೆ ಬೇಕಾದ ವಿಷಯ ಇದು ಎಂದು ಹೇಳಿದರು.
ಇನ್ನು ಮೂರು ಜನ ಉಪಮುಖ್ಯಮಂತ್ರಿಗಳ ವಿಚಾರದಲ್ಲಿ ಅವರ ಬುಡಕ್ಕೆ ಇವರು, ಇವರ ಬುಡಕ್ಕೆ ಅವರು ಇಡಲು ನೋಡುತ್ತಿದ್ದಾರೆ. ಈ ಮಧ್ಯೆ ಶಾಸಕರು ನಮ್ಮ ಮಾತು ಕೇಳುವವರಿಲ್ಲ, ಅಭಿವೃದ್ಧಿ ಇಲ್ಲ ಅಂತಿದ್ದಾರೆ. ಹೀಗಾಗಿ ಈ ಸರ್ಕಾರ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಇನ್ನು ಸ್ವಲ್ಪ ದಿನದಲ್ಲಿ ಸ್ಪೋಟವಾಗಲಿದೆ ಎಂದು ಭವಿಷ್ಯ ನುಡಿದರು.
ನಾನು ಬಿಜೆಪಿಗೆ ಬಂದ ಬಳಿಕವೇ ಸೋತಿದ್ದು ಎಂಬ ಮಾಜಿ ಸಚಿವ ವಿ.ಸೋಮಣ್ಣ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅನುಭವ, ಅದು ಸತ್ಯ ಕೂಡ ಇದೆ. ಅದಕ್ಕೆ ಕಾರಣಗಳು ಬೇರೆ ಬೇರೆ ಇವೆ. ವಿ. ಸೋಮಣ್ಣ ಅವರು ಕ್ಷೇತ್ರ ಬದಲಾವಣೆ ಮಾಡಿರುವ ಕಾರಣಗಳೂ ಇವೆ ಎಂದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಪಕ್ಷ ನಾಯಕನ ಆಯ್ಕೆ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯಾಧ್ಯಕ್ಷ ಇದ್ದಾರೆ, ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷ, ವಿಪಕ್ಷ ನಾಯಕ ಎರಡನ್ನೂ ಒಟ್ಟಿಗೆ ನೇಮಕ ಮಾಡಲು ವಿಳಂಬ ಆಗಿರುವುದು ನಿಜ. ಆದರೆ, ನಾನು ಈಗಾಗಲೇ ದೆಹಲಿ ನಾಯಕರೊಟ್ಟಿಗೆ ಮಾತಾಡಿದ್ದೇನೆ. ಐದು ರಾಜ್ಯಗಳ ಟಿಕೆಟ್ ಫೈನಲ್ ಆದ ನಂತರ ಮಾಡುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಬರ ಪರಿಹಾರ ಇಚ್ಚಾಶಕ್ತಿ ಕೊರತೆ:
ಬರ ಪರಿಹಾರ ವಿಚಾರಕ್ಕೆ ಆಗಲೇ ಕೇಂದ್ರ ಸರ್ಕಾರ ಮೊದಲ ಕಂತಿನ ಹಣ, ಎರಡು ತಿಂಗಳ ಹಿಂದೆಯೇ 350 ಕೋಟಿ ರೂ. ರಿಲೀಸ್ ಮಾಡಿದೆ. ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲೂ ದುಡ್ಡಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಮನಸ್ಸಿಲ್ಲ. ಈಗ ಬರದಲ್ಲಿರುವವರಿಗೆ ಕೊಟ್ಟರೆ ಮತ್ತೆ ಮುಂದೆ ಏನಾದರೂ ಕೇಳಿದರೆ ಕಷ್ಟ ಅಂತ. ಗ್ಯಾರಂಟಿಗಳಿಗೆ ದುಡ್ಡು ಕೊಟ್ಟಿರುವುದರಿಂದ, ಮೀನಾ, ಮೇಷ ನೋಡುತ್ತಿದ್ದಾರೆ ಎಂದು ಹೇಳಿದರು.