ಮುಂಬೈ, ಅ 11 (DaijiworldNews/AK):ಮಹಾರಾಷ್ಟ್ರದಲ್ಲಿರುವ ನಾಂದೆಡ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 8 ದಿನಗಳಲ್ಲಿ 108 ಮಂದಿ ಸಾವನ್ನಪ್ಪಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
24 ಗಂಟೆಯಲ್ಲಿ ನವಜಾತ ಶಿಶು ಸೇರಿ 11 ಮಂದಿ ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರೋಗಿಗಳು ಮಾತ್ರ ಸಾವನ್ನಪ್ಪುತ್ತಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ.
ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ. ಕಳೆದ 24 ಗಂಟೆಯಲ್ಲಿ 1,100ಕ್ಕೂ ಹೆಚ್ಚು ಮಂದಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ 191 ಮಂದಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಡೀನ್ ಡಾ. ಶಂಕರ್ ರಾವ್ ಚವಾಣ್ ತಿಳಿಸಿದ್ದಾರೆ.
ಈ ಹಿಂದೆ ಔಷಧಿ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ವೈದ್ಯರು ಹೇಳುತ್ತಿದ್ದರು. ಆದರೆ ಡೀನ್ ಈ ಆರೋಪವನ್ನು ಅಲ್ಲಗೆಳೆದಿದ್ದಾರೆ. ಯಾವುದೇ ರೋಗಿಯೂ ಔಷಧಿ ಕೊರತೆಯಿಂದ ಸಾವನ್ನಪಿಲ್ಲ. ಬದಲಿಗೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮೃತಪಟ್ಟಿದ್ದಾರೆ ಎಂದು ಡೀನ್ ಸ್ಪಷ್ಟನೆ ನೀಡಿದ್ದಾರೆ.
ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 60ಕ್ಕೂ ಹೆಚ್ಚು ಶಿಶುಗಳು ದಾಖಲಾಗಿದೆ. ಈ ಶಿಶುಗಳನ್ನು ನೋಡಿಕೊಳ್ಳಲು ಕೇವಲ ಮೂವರು ದಾದಿಯರು ಮಾತ್ರ ಇದ್ದಾರೆ ಎಂದು ಸಿಎಂ ಅಶೋಕ್ ಚೌಹಾಣ್ ತಿಳಿಸಿದರು.