ಬೆಂಗಳೂರು,ಅ 11 (DaijiworldNews/AK): ರಾಜ್ಯದಲ್ಲಿ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡುವ ಕಾಂಗ್ರೆಸ್ ಸರಕಾರವಿದೆ ಎಂದು ರಾಜ್ಯದ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ. ಲೋಡ್ ಶೆಡ್ಡಿಂಗ್ ಇದೆ. ರಾಜ್ಯದಾದ್ಯಂತ ಬರಗಾಲದ ಛಾಯೆ ಆವರಿಸಿದೆ ಎಂದು ವಿವರಿಸಿದರು.
ಈ ವರ್ಷ ಇದುವರೆಗೂ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಸಂಭವಿಸಿದೆ. ಆದರೆ, ಸರಕಾರವು ಒಬ್ಬನೇ ಒಬ್ಬ ರೈತರಿಗೆ ಒಂದೇ ಒಂದು ಹೆಕ್ಟೇರ್ಗೆ, ಒಂದು ಪೈಸೆ ಪರಿಹಾರವನ್ನೂ ಕೊಟ್ಟಿಲ್ಲ. ಕಳೆದ ವರ್ಷ ನಮ್ಮ ಬಿಜೆಪಿ ಸರಕಾರದ ಅವಧಿಯಲ್ಲಿ 39,74,741 ಹೆಕ್ಟೇರ್ ಭೂಮಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದಿಂದ ಬರ ಪರಿಹಾರಕ್ಕಾಗಿ ಕಾಯಲಿಲ್ಲ. ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ಗೆ 6,800 ರೂ ಇದ್ದರೆ, ನಮ್ಮ ಸರಕಾರ 13,600 ರೂ. ಅಂದರೆ ದ್ವಿಗುಣ ಮೊತ್ತದ ಪರಿಹಾರವನ್ನು ಕೊಟ್ಟಿದ್ದೇವೆ. ತೋಟಗಾರಿಕಾ ಬೆಳೆಗೆ 13 ಸಾವಿರದ ಬದಲು 25 ಸಾವಿರಕ್ಕೆ ಏರಿಸಲಾಗಿತ್ತು ಎಂದು ತಿಳಿಸಿದರು.