ನವದೆಹಲಿ, ಅ 13 (DaijiworldNews/MS): ದೇಶದಲ್ಲಿ ಕೋಲಾಹಲ ಸೃಷ್ಟಿಸಿದ ಹಿಂದೂಗಳ ಪವಿತ್ರ ಗಂಗಾಜಲದ ಮೇಲಿನ ತೆರಿಗೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಗಂಗಾಜಲಕ್ಕೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ಇದೆ ಎಂದು ಹೇಳಿದೆ.
ಗಂಗಾಜಲದ ಮೇಲೆ ಕೇಂದ್ರ ಸರಕಾರವು ಶೇ. 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯನ್ನು ವಿಧಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.
"ದೇಶದಾದ್ಯಂತ ಕೋಟ್ಯಂತರ ಹಿಂದೂ ಕುಟುಂಬಗಳು ಪೂಜೆಯಲ್ಲಿ ಗಂಗಾಜಲವನ್ನು ಬಳಸುತ್ತಾರೆ . ಅಲ್ಲದೇ, ಪೂಜೆ ಸಾಮಗ್ರಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ಇದೆ. ಜಿಎಸ್ಟಿ ಜಾರಿಗೆ ಬಂದ ದಿನದಿಂದಲೂ ಈ ಎಲ್ಲಾ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ," ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ( ಸಿಬಿಐಸಿ)ಯು ಸ್ಪಷ್ಟನೆ ನೀಡಿದೆ.
ಮಲ್ಲಿಕಾರ್ಜುನ ಖರ್ಗೆ ಅವರು 'ಎಕ್ಸ್' (ಹಿಂದಿನ ಟ್ವಿಟ್ಟರ್) ಪೋಸ್ಟ್ನಲ್ಲಿ "ಕೇಂದ್ರ ಸರಕಾರವು ಗಂಗಾಜಲದ ಮೇಲೆ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ವಿಧಿಸಿದೆ. ಇದು ಲೂಟಿ ಮತ್ತು ಬೂಟಾಟಿಕೆಗಳ ಪರಮಾವಧಿ," ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದರು.