ಬೆಂಗಳೂರು, ಅ 14 (DaijiworldNews/MS): ಎರವಲು ಸೇವೆಯಲ್ಲಿ ಮತ್ತೊಂದು ಇಲಾಖೆಯ ಸೇವೆಗೆ ನಿಯೋಜಿತಗೊಂಡ ಅಧಿಕಾರಿಗಳಿಗೆ ಒಂದೇ ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಯಬೇಕು ಎಂಬ ನಿಯಮ ಕಡ್ಡಾಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಅಧಿಕಾರಿಯೊಬ್ಬರನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಕಂದಾಯ ಇಲಾಖೆಗೆ ಎರವಲು ಸೇವೆ ಮೂಲಕ ನಿಯೋಜಿಸಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪುರಸ್ಕರಿಸಿದ್ದ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಆದೇಶವನ್ನು ಎತ್ತಿ ಹಿಡಿದಿದೆ.
ಮಾತೃ ಇಲಾಖೆಗೆ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಗ್ರೇಡ್-1 ತಹಸೀಲ್ದಾರ್ ಆಗಿದ್ದ ಪಿ.ದಿನೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ಮಾಡಿದೆ.
ಸರ್ಕಾರದ ಯಾವುದೇ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಇದ್ದ ಸಂದರ್ಭದಲ್ಲಿ ಮತ್ತೊಂದು ಇಲಾಖೆಯಿಂದ ಎರವಲು ಪಡೆದುಕೊಳ್ಳಲಾಗಿರುತ್ತದೆ. ಅರ್ಜಿದಾರರ ಸ್ಥಾನಕ್ಕೆ ಕಂದಾಯ ಇಲಾಖೆಗೆ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಗಳು ಅಧಿಕಾರಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ಕಾರಣದಿಂದ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ” ಎಂದು ಪೀಠ ಹೇಳಿದೆ.
ಒಂದೇ ಹುದ್ದೆಯಲ್ಲಿ ಎರಡು ವರ್ಷ ಪೂರ್ಣಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಈ ವೇಳೆ ಪೀಠ ತಳ್ಳಿಹಾಕಿದೆ.