ಬೆಂಗಳೂರು, ಅ 16 (DaijiworldNews/Ak) :ಐಟಿ ದಾಳಿ ವೇಳೆ ಸಿಕ್ಕ ಕೋಟ್ಯಂತರ ರೂಪಾಯಿ ನಗದು ಹಣ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲವನ್ನೇ ಸೃಷ್ಟಿಸಿದೆ. ಮಾಜಿ ಕಾರ್ಪೊರೇಟರ್ ಗುತ್ತಿದಾರರ ಹಾಗೂ ಬಿಲ್ಡರ್ ಮನೆಯಲ್ಲಿ 40 ಕೋಟಿಗೂ ಅಧಿಕ ಹಣ ಜಪ್ತಿ ಮಾಡಲಾಗಿದೆ.
ಈ ದಾಳಿ ಬೆನ್ನಲ್ಲೇ ವಿಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಾಚಾಟ ಶುರುವಾಗಿದೆ. ಇದೀಗ ಬಿಜೆಪಿ, ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದಲ್ಲಿ 1000 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ ಎಂದು ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ತೆಲಂಗಾಣ ಕಾಂಗ್ರೆಸ್ಗೆ 300 ಕೋಟಿ ರೂ., ಮಿಜೋರಾಂ ಕಾಂಗ್ರೆಸ್ಗೆ 100 ಕೋಟಿ ರೂಪಾಯಿ, ಛತ್ತಿಸ್ಗಢ ಕಾಂಗ್ರೆಸ್ಗೆ 200 ಕೋಟಿ ರೂ., ರಾಜಸ್ಥಾನ ಕಾಂಗ್ರೆಸ್ಗೆ 200 ಕೋಟಿ ರೂ., ಮಧ್ಯಪ್ರದೇಶ ಕಾಂಗ್ರೆಸ್ಗೆ 200 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ. ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ರೂ. ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿ ಬಿಜೆಪಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಹಿಡಿದುಕೊಂಡ ಬಜೆಟ್ ಸೂಟ್ ಕೇಸ್ ಮೇಲೆ ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.