ಹೊಸದಿಲ್ಲಿ, ಎ.13(AZM):ಪ್ರಧಾನಿ ಮೋದಿ ಹಾಗೂ ಸರಕಾರದ ಸೂಚನೆಯಂತೆ ಚುನಾವಣಾ ಆಯೋಗವು ಕಾರ್ಯ ನಿರ್ವಹಿಸುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಯ್ಡು, ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದರೂ ಅದು ರಾಜ್ಯ ಸರಕಾರದೊಂದಿಗೆ ಸಹಕರಿಸುತ್ತಿಲ್ಲ ಎಂದು ಹೇಳಿದರು.
ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಮತದಾನ ಪ್ರಕ್ರಿಯೆಗೆ ಬಳಸಲಾಗಿದ್ದ ಇವಿಎಂ(ವಿದ್ಯುನ್ಮಾನ ಮತಯಂತ್ರ)ಗಳಲ್ಲಿ ಶೇ.30ರಿಂದ 40ರಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಆಕ್ಷೇಪಿಸಿರುವ ನಾಯ್ಡು, ದಿಲ್ಲಿಗೆ ತೆರಳಿ ಚುನಾವಣಾ ಅಧಿಕಾರಿಗಳನ್ನು ಭೇಟಿಮಾಡಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಧರಣಿ ಮುಷ್ಕರ ನಡೆಸಲಾಗುವುದು ಎಂದು ನಾಯ್ಡು ಎಚ್ಚರಿಸಿದ್ದಾರೆ. ಮತದಾನದ ದಿನ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ನಾಯ್ಡು ಆಂಧ್ರಪ್ರದೇಶದಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದರು.
ಅಧಿಕೃತ ಮಾಹಿತಿಯಂತೆ ಆಂಧ್ರಪ್ರದೇಶದಲ್ಲಿ ಮತದಾನಕ್ಕೆ ಬಳಸಲಾದ 4,583 ಇವಿಎಂಗಳು ಕಾರ್ಯಸ್ಥಗಿತಗೊಳಿಸಿರುವುದು ಗಂಭೀರ ವಿಷಯವಾಗಿದೆ. ಭಾರೀ ಗೊಂದಲ ಗಲಿಬಿಲಿಗೆ ಎಡೆಮಾಡಿದ ಪ್ರಹಸನವಾಗಿದೆ . ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಗೋಪಾಲಕೃಷ್ಣ ದ್ವಿವೇದಿ ಮತ ಚಲಾಯಿಸಬೇಕಿದ್ದ ಮತಗಟ್ಟೆಯ ಇವಿಎಂ ಕೂಡಾ ಕೆಟ್ಟುಹೋಗಿತ್ತು ಎಂದು ನಾಯ್ಡು ಹೇಳಿದರು.