ಬೆಂಗಳೂರು, ಅ 17 (DaijiworldNews/HR): ಮುಖ್ಯಮಂತ್ರಿಯವರ ಸೂಚನೆಯಂತೆ ರಾಜ್ಯದ ರೈತರಿಗೆ 5 ತಾಸು ನಿರಂತರ ವಿದ್ಯುತ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರೈತರಿಗೆ ತೊಂದರೆಯಾಗದಂತೆ ಸತತ 5 ತಾಸು ವಿದ್ಯುತ್ ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಎಲ್ಲ ಎಸ್ಕಾಂ ಎಂಡಿಗಳಿಗೆ ಸೂಚಿಸಿದ್ದೇನೆ. ಬೆಳಗ್ಗೆ 2, ರಾತ್ರಿ 1 ಪಾಳಿಯಲ್ಲಿ ಅಂದರೆ ಒಟ್ಟು 3 ಪಾಳಿಯಲ್ಲಿ ವಿದ್ಯುತ್ ನೀಡಲಾಗುವುದು. ಯಾವ ಪ್ರದೇಶದಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಇರುತ್ತದೆ ಎಂಬ ಮಾಹಿತಿಯನ್ನು ಪ್ರತಿಕೆ, ರೇಡಿಯೋ, ಎಸ್ಎಂಎಸ್ಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದರು.
ಇನ್ನು ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಮಳೆ ಆಗಿದ್ದರೂ ಸಾಮರ್ಥ್ಯಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ನೈಸರ್ಗಿಕ ಕಾರಣದಿಂದ ಈಗ ವಿದ್ಯುತ್ ಅಭಾವ ಎದುರಾಗಿದೆ. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು, ಕರ್ನಾಟಕ ಕತ್ತಲ್ಲಲ್ಲಿದೆ ಎನ್ನುತ್ತಿರುವುದು ತಪ್ಪು ಎಂದು ಹೇಳಿದ್ದಾರೆ.