ಬೆಂಗಳೂರು,ಅ 17 (DaijiworldNews/Ak): ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿದ ಹಣದ ಕುರಿತ ಪರದೇ ಕೆ ಪೀಛೇ ಇರುವ ಕಾಂಗ್ರೆಸ್ ಕೈಗಳನ್ನು ಹೊರಕ್ಕೆ ತರಲು ಸಿಬಿಐ ಈ ಪ್ರಕರಣದ ತನಿಖೆಯನ್ನು ಸ್ವಯಂಪ್ರೇರಿತವಾಗಿ ಮಾಡಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಆಗ್ರಹಿಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ವತಿಯಿಂದ ಇಂದು ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ಸಿನ ಮುಖವಾಡ ಕಳಚುವ ಕೆಲಸ ಆಗಬೇಕು. ಇಡೀ ದೇಶಕ್ಕೆ ಒಂದು ಸಂದೇಶ ಕೊಡುವ ಕೆಲಸ ಆಗಲಿ ಎಂದು ಅವರು ಆಶಿಸಿದರು
ಸರಕಾರ 650 ಕೋಟಿ ಕೊಟ್ಟದ್ದಕ್ಕೆ ಪ್ರತಿಯಾಗಿ ಕಮಿಷನ್ ರೂಪದಲ್ಲಿ ಗುತ್ತಿಗೆದಾರರು ಹಣ ನೀಡಿದ್ದಾರೆ. ಇದರಲ್ಲಿ ಒಂದಷ್ಟು ಮೊತ್ತ ಈಗಾಗಲೇ ಬೇರೆಬೇರೆ ರಾಜ್ಯಗಳಿಗೆ ಕಳಿಸಿದ್ದಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುವ ಸಂಕಲ್ಪದಲ್ಲಿ ಒಂದಷ್ಟು ಹಂತವನ್ನು ನಾವು ತಲುಪಿದ್ದೇವೆ. ಆಸೆ, ಆಮಿಷ ತೋರಿಸಿ ಜನರ ಹಾದಿ ತಪ್ಪಿಸಿ ಚುನಾವಣೆಯಲ್ಲಿ ಅಧಿಕಾರ ಪಡೆದ ಕಾಂಗ್ರೆಸ್ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ ಎಂದು ತಿಳಿಸಿದರು.
ರಾಜ್ಯದ ಪರಿಸ್ಥಿತಿ ಅಧೋಗತಿಗೆ ಬಂದ ಬಗ್ಗೆ ಬಿಜೆಪಿಯ ನಮಗೆಲ್ಲರಿಗೂ ನೋವಿದೆ. ದೇಶದೆಲ್ಲೆಡೆ ಜನರು ಕರ್ನಾಟಕದ ಬಗ್ಗೆ ನಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬಿಕಾಪತಿಗೆ 42 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಈ ಪ್ರಕರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರಿಗೆ ನೀಡುವ 2 ಸಾವಿರ ರೂಪಾಯಿ ಹಣ ರಾಜ್ಯದ ಅರ್ಧದಷ್ಟು ಜನರಿಗೆ ಸಿಕ್ಕಿಲ್ಲ.ಹಣ ಲೂಟಿ ಹೊಡೆಯಲೆಂದೇ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.