ಲಕ್ನೋ, ಏ 13(SM): ದೇಶವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹಾಗೂ ಬಹು ಜನರ ನೆಚ್ಚಿನ ಪ್ರಧಾನಿ ನರೇಂದ್ರಮೋದಿಯವರು ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಲ್ಲಿ ಮೋದಿಗೆ ಸವಾಲೊಡ್ಡಲು ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಮುಂದಡಿ ಇಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಈ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಲೀಕ್ ಔಟ್ ಆಗಿದ್ದು, ಮೋದಿ ವಿರುದ್ಧ ಪ್ರೀಯಾಂಕಾ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪ್ರಧಾನಿ ಮೋದಿಯವರು ಮುಂದಿನ ಅವಧಿಗೂ ಪ್ರಧಾನಿ ಎಂಬುದು ಬಿಜೆಪಿ ಪಕ್ಷದ ಮಾತಾಗಿದೆ. ಆದರೆ, ಇವರ ವಿರುದ್ಧವೇ ಸ್ಪರ್ಧಿಸಲು ಪ್ರಿಯಾಂಕಾ ಒಪ್ಪಿಗೆ ನೀಡಿದ್ದಾರೆ. ಆದರೆ, ಮುಂದಿನ ತೀರ್ಮಾನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಗೊಳ್ಳಲಿದ್ದಾರೆ.
ಸದ್ಯದ ಮಟ್ಟಿಗೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟ್ಟಿ ಹಾಕುವಂತಹ ಪ್ರಬಲ ಸ್ಪರ್ಧಿ ಯಾರು ಕಣದಲ್ಲಿಲ್ಲ. ಮೋದಿ ಅವರ ಗೆಲುವು ಶತಸಿದ್ಧ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಪ್ರೀಯಾಂಕ ನಡೆ ಅಚ್ಚರಿಗೆ ಕಾರಣವಾಗಿದೆ.
ಇನ್ನೊಂದೆಡೆ ಈ ಹಿಂದೆ ಪ್ರಿಯಾಂಕಾ ಗಾಂಧಿಯವರಿಗೆ ಅಮೇಥಿ ಅಥವಾ ರಾಯ್ ಬರೆಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ ತಾನು ವಾರಣಾಸಿಯಿಂದ ಯಾಕೆ ಸ್ಪರ್ಧಿಸಬಾರದು ಎಂದಿದ್ದರು.