ನವದೆಹಲಿ, ಅ 19 (DaijiworldNews/MS): ಕಾಂಗ್ರೆಸ್ ನಾಯಕ ಇತ್ತೀಚೆಗೆ 'ನೂರಿ' ಎಂಬ ನಾಯಿಮರಿಯನ್ನು ಅವರ ತಾಯಿ ಸೋನಿಯಾ ಗಾಂಧಿಗೆ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿದ್ದು. ಆದರೆ ಈಗ ನಾಯಿ ಮರಿಯ ಹೆಸರು ರಾಹುಲ್ ಗಾಂಧಿಗೆ ಸಂಕಷ್ಟ ತಂದಿದೆ. ಎಐಎಂಐಎಂ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಯಾಗ್ರಾಜ್ನ ಸ್ಥಳೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಪವಿತ್ರ ಕುರಾನ್ನಲ್ಲಿ ಸ್ಥಾನ ಪಡೆದಿರುವ ಹೆಸರನ್ನು ನಾಯಿ ಮರಿಗೆ ಇಟ್ಟಿದ್ದಕ್ಕಾಗಿ ಎಐಎಂಐಎಂ ವಕ್ತಾರ ಮೊಹಮ್ಮದ್ ಫರ್ಹಾನ್ ಅವರು ತಮ್ಮ ವಕೀಲ ಅಮ್ಜದ್ ಅಲಿ ಮೂಲಕ ರಾಹುಲ್ ಗಾಂಧಿ ದೂರು ದಾಖಲಿಸಿದ್ದಾರೆ.
ಅಕ್ಟೋಬರ್ 4ರಂದು ವಿಶ್ವ ಪ್ರಾಣಿ ದಿನದಂದು ರಾಹುಲ್ ತಮ್ಮ ತಾಯಿ ಮತ್ತು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ರಾಹುಲ್ ಹಂಚಿಕೊಂಡಿದ್ದರು.
ಕುತೂಹಲಕಾರಿ ವಿಚಾರವೆಂದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೂರು ತಿಂಗಳ ಹಿಂದೆ ಸ್ವತಃ ಫರ್ಹಾನ್ ವಿರುದ್ಧವೇ ಎಫ್ಐಆರ್ ದಾಖಲಾಗಿತ್ತು. ಸದ್ಯ ಫರ್ಹಾನ್ ಬಂಧನಕ್ಕೆ ತಡೆ ನೀಡಲಾಗಿದೆ.
ಮಾಧ್ಯಮಗಳ ವರದಿಯಂತೆ, ರಾಹುಲ್ ಗಾಂಧಿ ಅವರು ತಮ್ಮ ನಾಯಿ ಮರಿಗೆ ‘ನೂರಿ’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಪ್ರವಾದಿ ಮುಹಮ್ಮದ್ ಅವರಿಗೆ ಸಂಪರ್ಕ ಹೊಂದಿರುವುದರಿಂದ ಅದನ್ನು ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು ಮೊಹಮ್ಮದ್ ಫರ್ಹಾನ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.