ಹೈದರಾಬಾದ್, ಅ 19 (DaijiworldNews/AK):ತೆಲಂಗಾಣದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ನವೆಂಬರ್ 30 ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನಲೆ ತೆಲಂಗಾಣದಲ್ಲಿ ಕಾಂಗ್ರೆಸ್ ನ ವಿಜಯಭೇರಿ ಯಾತ್ರೆ ಭೂಪಾಲಪಲ್ಲಿಯಿಂದ ಪೆದ್ದಪಲ್ಲಿಗೆ ತೆರಳುವ ಮಾರ್ಗದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜಾತಿ ಗಣತಿ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಜಾತಿ ಗಣತಿ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ "ಎಕ್ಸ್-ರೇ" ಇದ್ದಂತೆ. ಇದು ನಮ್ಮ ತೆರಿಗೆ ಹಣ ಹೇಗೆ ಹಂಚಿಕೆಯಾಗುತ್ತಿದೆ ಎಂಬುದನ್ನು ನಿರ್ಧರಿಸುತ್ತದೆ ಎಂದರು.
ನೀವು ಮೋದಿ ಮತ್ತು ಕೆಸಿಆರ್ ಅವರನ್ನು ಜಾತಿ ಗಣತಿಯನ್ನು ಯಾವಾಗ ಎಂದು ಪ್ರಶ್ನಿಸಬೇಕು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ಮಾಡುವ ಮೊದಲ ಕೆಲಸವೆಂದರೆ ಜಾತಿ ಗಣತಿ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಾದ ಛತ್ತೀಸ್ಗಢ, ರಾಜಸ್ಥಾನ ಮತ್ತು ಕರ್ನಾಟಕಕ್ಕೆ ಜಾತಿ ಗಣತಿ ನಡೆಸುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.