ಬೆಂಗಳೂರು, ಅ. 20 (DaijiworldNews/AK): ಮಲಬಾರ್ ಗ್ರೂಪ್ ವತಿಯಿಂದ ನಿರ್ಗತಿಕ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ 'ಅಜ್ಜಿ ಮನೆ' ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ವರ್ ಶುಕ್ರವಾರ ಚಾಲನೆ ನೀಡಿದರು.
ಕತ್ರಿಗುಪ್ಪೆಯಲ್ಲಿ ನಿರ್ಮಿಸಲಾಗಿರುವ 'ಅಜ್ಜಿ ಮನೆ'ಗೆ ಚಾಲನೆ ನೀಡಿ ಮಾತನಾಡಿ ಅವರು, ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ದೇಶ, ವಿದೇಶಗಳಲ್ಲಿ ಚಿನ್ನಾಭರಣ ಸಂಸ್ಥೆಗಳನ್ನು ಹೊಂದಿರುವ ಮಲಬಾರ್, ಇದೀಗ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಮಾದರಿಯಾಗಿದೆ.
ನಿರ್ಗತಿಕ ಮಹಿಳೆಯರಿಗಾಗಿ ಮಲಬಾರ್ ಅತ್ಯುತ್ತಮ ಕೆಲಸ ನಿರ್ವಹಿಸುತ್ತಿದೆ. ಇದು ದೇವರ ಕೆಲಸ, ಸಿಎಸ್ ಆರ್ ಫಂಡ್ ಮೂಲಕ ವಿದ್ಯಾರ್ಥಿಗಳಿಗೂ ಸಂಸ್ಥೆ ಅನುಕೂಲ ಮಾಡುತ್ತಿದೆ. ಎಂದು ತಿಳಿಸಿದರು.
ಮಲಬಾರ್ ಗ್ರೂಪ್ನ ಸಿಎಸ್ಆರ್ ಸಂಸ್ಥೆಯಾಗಿರುವ ಮಲಬಾರ್ ಚಾರಿಟೇಬಲ್ ಟ್ರಸ್ಟ್ ಈ ಗ್ಯ್ರಾಂಡ್ಮಾ ಹೋಂ ಅಂದರೆ ಅಜ್ಜಿಮನೆಗೆ ಬೆಂಬಲವಾಗಿ ನಿಲ್ಲುತ್ತಿದ್ದು, ಸ್ವಯಂಸೇವಾ ಸಂಸ್ಥೆಯಾಗಿರುವ ತಣಲ್ ಸಂಸ್ಥೆಯು ನಿರ್ವಹಣೆ ಮಾಡುತ್ತದೆ. ಸುಮಾರು 14,780 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಜ್ಜಿಮನೆಯಲ್ಲಿ ಏಕಕಾಲಕ್ಕೆ 104 ಮಹಿಳೆಯರಿಗೆ ಆಶ್ರಯ ನೀಡಬಹುದಾಗಿದೆ.
ವೃದ್ಧಾಪ್ಯದಲ್ಲಿರುವ ಮಹಿಳೆಯರ ಯೋಗಕ್ಷೇಮ, ಅವರ ಅಗತ್ಯತೆಗಳನ್ನು ಪೂರೈಸುವುದು, ಹೀಗೆ ಹಲವು ಸೇವೆಗಳನ್ನು ಕಲ್ಪಿಸುವ ಮೂಲಕ ಅವರ ಜೀವನಮಟ್ಟವನ್ನು ಹೆಚ್ಚಿಸುವ ಸಜ್ಜುಗೊಂಡಿದೆ.ವಿಶೇಷವಾಗಿ ವೃದ್ಧರನ್ನು ನೋಡಿಕೊಳ್ಳುವ ಬಗ್ಗೆ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ಪ್ರತ್ಯೇಕ ವೈದ್ಯಕೀಯ ತಂಡದವು ದಿನ ಇಪ್ಪತ್ನಾಲ್ಕು ಗಂಟೆಗಳ ಕಾಲ ಈ ಮಹಿಳೆಯರ ಆರೈಕೆ ಮಾಡಲಿದ್ದಾರೆ.
ಕರ್ನಾಟಕದಲ್ಲಿ 22,000 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದ್ದು, ಯಾವುದೇ ಧರ್ಮ ಜಾತಿ, ಪಂಗಡ ಅಥವಾ ಭಾಷೆಯ ಗಡಿ ಇಲ್ಲದೇ ಈ ವಿದ್ಯಾರ್ಥಿ ವೇತನವನ್ನು ಪ್ರತಿಭೆ ಮತ್ತು ಅಗತ್ಯತೆ ಆಧಾರದಲ್ಲಿ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ ರಾಜ್ಯಾದ್ಯಂತ 6000 ಕ್ಕೂ ಹೆಚ್ಚು ಹೆಣ್ಣು ಮಕ್ಕಳ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ5.13 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಈ ವೇಳೆ ಮಲಬಾರ್ ಸಂಸ್ಥೆಯ ಚೇರ್ಮನ್ ಎಂ.ಪಿ.ಅಹಮದ್, ಎಂಡಿ ಅಶೆರ್, ಐಡ್ರೆಸ್.ವಿ, ಎ.ಕೆ.ಮೊಹಮದ್ ಮುಸ್ತಾಫ, ಕೆ.ಎಚ್.ಫಾರೂಕ್, ಫಿಲ್ಲೂರ್ ಬಾಬು ಉಪಸ್ಥಿತರಿದ್ದರು.