ಬೆಂಗಳೂರು, ಏ.14(AZM): ಪರ್ಸಂಟೇಜ್ ಹಿನ್ನಲೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಬಂದಿರುವುದರಿಂದ ಅವರು ರಾಜ್ಯಕ್ಕೆ ಬಂದಾಗಲೆಲ್ಲಾ ಪರ್ಸಂಟೇಜ್ ವಿಷಯವನ್ನೇ ಮಾತಾಡುತ್ತಾರೆ ಬಿಟ್ಟರೆ ಅದರ ವ್ಯಾಪ್ತಿಯಿಂದ ಹೊರ ಬಂದು ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೋದಿಯವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೋದಿಯವರಿಂದ ಬೇರೆ ಏನನ್ನೂ ಬಯಸಲಾಗುವುದಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಬೇರೆ ಯಾವ ವಿಷಯವೂ ಇಲ್ಲದಿರುವುದರಿಂದ ಪರ್ಸಂಟೇಜ್ ಎಂಬ ಸುಳ್ಳು ಆರೋಪ ಮಾಡಿ ಹೋಗುತ್ತಾರೆ ಎಂದು ಕಿಡಿಕಾರಿದರು. ಮೋದಿ ಮಟ್ಟಕ್ಕೆ ನಾನು ಇಳಿದಿಲ್ಲ. ಆದಾಯ ತೆರಿಗೆ ಸೇರಿದಂತೆ ಯಾವುದೇ ತನಿಖೆಗೂ ನಾನು ಹೆದರಿಲ್ಲ. ಏಕೆಂದರೆ ನಾನು ಮುಖ್ಯಮಂತ್ರಿಯಾಗಿ ಗೋದ್ರಾದಂತಹ ಘಟನೆ ನಡೆಸಿ ಅಮಾಯಕರನ್ನು ಬಲಿ ಪಡೆದು ಮೋದಿಯವರ ಮಟ್ಟಕ್ಕೆ ಇಳಿದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.
ಐಟಿ ದಾಳಿ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದು, ಮೋದಿ ಲೇವಡಿ ಮಾಡುತ್ತಾರೆ. ಐಟಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನೋಡಬೇಕಿದೆ. ದೇವೇಗೌಡರು ಹಳ್ಳಿಯೊಂದರಲ್ಲಿ ಯಾರದೋ ಮನೆಗೆ ಊಟಕ್ಕೆ ಹೋದರೆ ಮಾರನೆ ದಿನ ಐಟಿ ಅವರು ಆ ಮನೆ ಮೇಲೆ ದಾಳಿ ಮಾಡುತ್ತಾರೆ. ಇದೊಂದು ಮಾನವೀಯತೆ ಇರುವ ಸರ್ಕಾರವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನಾನು ಆದಾಯ ತೆರಿಗೆ ದಾಳಿಗೆ ಹೆದರಿಲ್ಲ. ಯಾವುದೇ ತನಿಖೆಗೂ ಹೆದರಿಲ್ಲ. ಪ್ರಧಾನಮಂತ್ರಿಯವರು ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಹತ್ಯಾಕಾಂಡಕ್ಕಾಗಿ ಪೊಲೀಸ್ ತನಿಖೆ ಎದುರಿಸಿದ್ದರು. ನಾನು ಅವರ ಮಟ್ಟಕ್ಕೆ ಇಳಿದಿಲ್ಲ. ಮುಖ್ಯಮಂತ್ರಿಯಾಗಿ ಅಮಾಯಕರನ್ನು ಬಲಿ ಪಡೆದ ಮೋದಿಯವರಿಂದ ನಾನು ನೀತಿ ಪಾಠ ಕಲಿಯಬೇಕಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.