ಹೊಸದಿಲ್ಲಿ, ಎ.14: ಲೋಕಸಭಾ ಚುನಾವಣೆಯಲ್ಲಿ ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನಲೆ ಇವಿಎಂ ಬಳಕೆಯ ಕುರಿತು ಪ್ರತಿಪಕ್ಷಗಳು ಇಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಚರ್ಚಿಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ 20ಕ್ಕೂ ಅಧಿಕ ವಿಪಕ್ಷಗಳು ಹೊಸದಿಲ್ಲಿಯಲ್ಲಿ ಇಂದು ಸಭೆ ನಡೆಸಿವೆ. ಎ.11 ರಂದು ಆಂಧ್ರಪ್ರದೇಶ ಸೇರಿದಂತೆ ದೇಶವ್ಯಾಪಿ ಮೊದಲ ಹಂತದ ಮತದಾನ ನಡೆದಿದ್ದು ಅಲ್ಲಲ್ಲಿ ಇವಿಎಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿರಲಿಲ್ಲ. ಆಂಧ್ರಪ್ರದೇಶದಲ್ಲಿ ಅಧಿಕೃತ ಮಾಹಿತಿ ಪ್ರಕಾರ 4,583 ಎವಿಎಂಗಳಲ್ಲಿ ಲೋಪದೋಷ ಕಂಡುಬಂದಿತ್ತು.
''ನಾವು ಇವಿಎಂಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದೇವೆ. ಪೇಪರ್ ಟ್ರಯಲ್ ಯಂತ್ರಗಳಿಂದ ಮಾತ್ರ ಮತದಾರರ ವಿಶ್ವಾಸವನ್ನು ಮರಳಿಗಳಿಸಬಹುದು. ಮುಂದುವರಿದ ದೇಶಗಳಾದ ಜರ್ಮನಿ 2005ರಿಂದ 9ರ ತನಕ ಇವಿಎಂ ಬಳಸಿತ್ತು. ಇದೀಗ ಅದು ಪೇಪರ್ ಬ್ಯಾಲಟ್ ಮೊರೆ ಹೋಗಿದೆ.
ಹಾಲೆಂಡ್ನಲ್ಲಿ 1990ರಿಂದ 2007 ಇವಿಎಂ ಬಳಕೆಯಲ್ಲಿತ್ತು. ಐರ್ಲೆಂಡ್ನಲ್ಲಿ 2002-04ರ ಮಧ್ಯೆ ಇವಿಎಂ ಬಳಸಲಾಗುತ್ತಿತ್ತು. ಇದೀಗ ಆ ದೇಶಗಳಲ್ಲಿ ಮತ್ತೊಮ್ಮೆ ಮತಪತ್ರ ಬಳಸಲಾಗುತ್ತಿದೆ. ಇದರಿಂದ ಆ ದೇಶಗಳು ಏಕೆ ಪೇಪರ್ ಬ್ಯಾಲಟ್ಗೆ ಮೊರೆ ಹೋಗಿವೆ ಎಂದು ಸ್ಪಷ್ಟವಾಗುತ್ತದೆ'' ಎಂದು ನಾಯ್ಡು ಹೇಳಿದ್ದಾರೆ.