ಬೆಂಗಳೂರು, ಏ.14(AZM):ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟು ಸಹಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರಿನ ಉಲ್ಲಾಳ ನಿವಾಸಿ ಶ್ರೀನಿವಾಸರಾವ್(23) ಎಂದು ಗುರುತಿಸಲಾಗಿದೆ. ಪೂನಾದಿಂದ ಬೆಂಗಳೂರು ಕಡೆಗೆ ಕಂಟೈನರ್ ಲಾರಿಯಲ್ಲಿ ಅಣಬೆ ಸಾಗಿಸಲಾಗುತ್ತಿದ್ದು,ಯಶವಂತಪುರ ಫ್ಲೈಓವರ್ ಮೇಲೆ ವಾಹನ ಚಲಾಯಿಸಿಕೊಂಡು ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಲಾರಿ ಕೆಳಗೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಚಾಲಕ ಶ್ರೀನಿವಾಸರಾವ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತೊಬ್ಬ ಚಾಲಕ ತೀವ್ರ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಿಸಲಾಗಿದೆ. ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.