ನವದೆಹಲಿ, ಅ 16(DaijiworldNews/SK): ದೆಹಲಿಯ ಕೆಂಪು ಕೋಟೆಯಲ್ಲಿ ಇಂದು ನಡೆಯುವ ಲವಕುಶ ರಾಮ್ಲೀಲಾ ಸಮಾರಂಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರಾವಣ ದಹನ ಮಾಡಿ ಇತಿಹಾಸ ಬರೆಯಲಿದ್ದಾರೆ.
ಕಳೆದ 50 ವರ್ಷಗಳಿಂದ ಪುರುಷರಿಂದಲೇ ರಾವಣ ದಹನ ಮಾಡಲಾಗುತ್ತಿದ್ದು, ಹಿಂದಿನ ವರ್ಷ ಪ್ರಭಾಸ್ ಅವರು ರಾವಣ ದಹನ ಮಾಡಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ನರೇಂದ್ರ ಮೋದಿ, ರಾಮತಾಥ್ ಕೋವಿಂದ್, ಅಜಯ್ ದೇವಗನ್, ಜಾನ್ ಅಬ್ರಾಹಂ ಮುಂತಾದವರು ಇದರಲ್ಲಿ ಭಾಗಿ ಆಗಿದ್ದರು. ಆದರೆ ಈ ವರ್ಷ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯಿಂದ ರಾವಣ ದಹನ ಆಗುತ್ತಿದ್ದು, ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಆ ಮೂಲಕ ಕಂಗನಾ ರಣಾವತ್ ಹೊಸ ದಾಖಲೆ ಬರೆಯಲು ಮುಂದಾಗಿದ್ದು, ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಂಗನಾ ಅವರು ರಾವಣ ದಹನ ಮಾಡಲಿರುವ ಬಗ್ಗೆ ‘ಲವಕುಶ ರಾಮ್ಲೀಲಾ ಕಮಿಟಿ’ ಅಧ್ಯಕ್ಷ ಅರ್ಜುನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ‘ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂದು ನಮ್ಮ ಕಮಿಟಿ ಬಯಸುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದ್ದು, ಇನ್ನೂ ಸುಧಾರಣೆ ಆಗುವುದು ಬಾಕಿ ಇದೆ. ಮಹಿಳಾ ಮೀಸಲಾತಿ ಮಸೂದೆಯು ನಮ್ಮ ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದು ಹೇಳಿದ್ದಾರೆ.