ಕೋಲಾರ, ಅ 24 (DaijiworldNews/AK): ಕಾಂಗ್ರೆಸ್ ಮುಖಂಡ, ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರು ಮಂದಿಯನ್ನು ಬಂಧಿಸುವಲ್ಲಿ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಹಳೆ ವೈಷಮ್ಯವೇ ಶ್ರೀನಿವಾಸ್ ಅವರ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಸೆಂಟ್ರಲ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿ ಆರ್ ರವಿಕಾಂತೇಗೌಡ ತಿಳಿಸಿದ್ದಾರೆ.
ಆರೋಪಿಗಳಾದ ಶ್ರೀನಿವಾಸಪುರ ನಿವಾಸಿ ವೇಣುಗೋಪಾಲ್, ತನ್ನ ಸಹಚರರಾದ ಬಂಗಾರಪೇಟೆಯ ಸಂತೋಷ್, ಕೋಲಾರ ಪಟ್ಟಣದ ಮುನೀಂದ್ರ, ಮುಳಬಾಗಲಿನ ನಾಗೇಂದ್ರ, ಅರ್ಶಿತ್ ಕುಮಾರ್ ಮತ್ತು ವೆಮಗಲ್ನ ಅರುಣ್ ಕುಮಾರ್ ಸೇರಿ ಸೋಮವಾರ ಶ್ರೀನಿವಾಸ್ನ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಶ್ರೀನಿವಾಸಪುರದ ಹೊರವಲಯದಲ್ಲಿ ತಮ್ಮ ಜಾಗದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣ ನಡೆಯುತ್ತಿದ್ದ ಸ್ಥಳದ ಪಕ್ಕ ಶ್ರೀನಿವಾಸ್ ಬಂದಿದ್ದ ವೇಳೆ ಈ ಹತ್ಯೆ ನಡೆದಿದೆ.
ಆರು ಮಂದಿ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಬಂದು ಪೆಪ್ಪರ್ ಸ್ಪ್ರೇ ಮಾಡಿ ಶ್ರೀನಿವಾಸ್ ಅವರ ಮೇಲೆ ಮಾರಕ ಅಸ್ತ್ರದಿಂದ ದ ಹಲ್ಲೆ ನಡೆಸಿದ್ದಾರೆ. ಅವರ ಜೊತೆಯಲ್ಲಿದ್ದ ಅವರ ಸಂಬಂಧಿಯ ಮೇಲೆ ಹಲ್ಲೆಗೆ ಯತ್ನಿಸಿದರು, ಆದರೆ ಅವರು ಸ್ಥಳದಿಂದ ಓಡಿಹೋದರು ಎನ್ನಲಾಗಿದೆ.