ಬೆಂಗಳೂರು, ಅ 26 (DaijiworldNews/MR): ಹುಲಿ ಉಗುರಿನ ಪದಕ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯರೂ ಆಗಿರುವ ಚಿತ್ರನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ತಪಾಸಣೆಗಾಗಿ ನಿನ್ನೆ ಸಂಜೆ ನಟ ಜಗ್ಗೇಶ್ ಅವರ ಮನೆಗೆ ತಪಾಸಣೆಗಾಗಿ ತೆರಳಿದ್ದರು. ಅವರು ಆ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ. ಜಗ್ಗೇಶ್ ಅವರ ಪತ್ನಿ ಪರಿಮಳ ಅವರು ಹುಲಿಯ ಉಗುರುಗಳಿರುವ ಚಿನ್ನದ ಲಾಕೆಟ್ ಅನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದರು.
ಈ ಕುರಿತು ಮಾತನಾಡಿರುವ ಜಗ್ಗೇಶ್, ನನಗೆ 61 ವರ್ಷ, ಮುಂದೆ 100 ವರ್ಷ ಆಗಬಹುದು. ನನ್ನ ತಾಯಿ ನನ್ನ ದೇವರು. ನಾನು ಏನು ಕಳೆದುಕೊಂಡರೂ ಸಂಕಟಪಡುವುದಿಲ್ಲ. ಆದರೆ ನನ್ನ ಅಮ್ಮನ ಕೊನೆಯ ಪ್ರೀತಿ ಕಳೆದುಕೊಂಡದ್ದು ನನಗೆ ಜೀವನದಲ್ಲಿ ಶೂನ್ಯದಂತೆ ಆಯಿತು. ತಂದೆ ತಾಯಿಯನ್ನು ಹೃದಯದಲ್ಲಿ ಇರಿಸಿಕೊಂಡಿದ್ದೇನೆ. ತಂದೆತಾಯಿಯನ್ನು ಅನಾಥಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ಞಾನಿಗಳಿಗೆ ಆ ಪ್ರೀತಿಯ ಅರಿವಾಗದು, ಎಲ್ಲಾದಕ್ಕು ಉತ್ತರಿಸಲು ದೇವರಿದ್ದಾನೆ ಕಾಲಬರುತ್ತದೆ ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.