ಮದ್ರಾಸ್, ಅ 27 (DaijiworldNews/MS): ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಪಿಎಫ್ಐ ಸದಸ್ಯರು ಎಂದು ಆರೋಪಿಸಲಾದ ಎಂಟು ಮಂದಿಗೆ ಮದ್ರಾಸ್ ಹೈಕೋರ್ಟ್ ಜಾಮೀನು ನೀಡಿದೆ.
ಭಯೋತ್ಪಾದನೆಗಾಗಿ ಹಣ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಎನ್ಐಎ ಆರೋಪಿಸಿತ್ತು. ಉಗ್ರ ಚಟುವಟಿಕೆಗಳೊಂದಿಗೆ ಮೇಲ್ಮನವಿದಾರರು ನೇರ ಸಂಬಂಧ ಹೊಂದಿದ್ದಾರೆ ಎನ್ನಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಅವರಿದ್ದ ಪೀಠ ತಿಳಿಸಿದೆ.
ಆರ್ಎಸ್ಎಸ್ ಮತ್ತು ಕೆಲ ಹಿಂದೂ ಪರ ಸಂಘಟನೆಗಳ ನಾಯಕರ ಭಾವಚಿತ್ರಗಳು ಆರೋಪಿಗಳ ಬಳಿ ದೊರೆತಿದ್ದು ಈ ನಾಯಕರು ʼಹಿಟ್ ಲಿಸ್ಟ್ʼನಲ್ಲಿದ್ದರು ಎಂಬುದನ್ನು ಸೂಚಿಸುತ್ತದೆ. ಪಿಎಫ್ಐನ 'ಮುನ್ನೋಟದ ವರದಿ'ಯನ್ನು ಆಧರಿಸಿ ಪಿಎಫ್ಐ ರಾಜಕೀಯ ಅಧಿಕಾರ ಗಳಿಸುವ ಉದ್ದೇಶ ಹೊಂದಿದೆ. ಮತ್ತು 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಸರ್ಕಾರ ಸ್ಥಾಪಿಸಲು ಕೆಲಸ ಮಾಡುತ್ತಿದೆ ಎಂದು ಎನ್ಐಎ ವಾದಿಸಿತ್ತು.
ಆದರೆ ಇದನ್ನು ಒಪ್ಪದ ನ್ಯಾಯಾಲಯ ಕಾಮಾಲೆ ಕಣ್ಣುಗಳಿಂದ ನೋಡಿದಾಗ ಅವರ ಪ್ರತಿಯೊಂದು ಕೆಲಸವೂ ಕಾನೂನುಬಾಹಿರವಾಗಿ ತೋರಬಹುದು. ಇದನ್ನು ಸತ್ಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.