ಕೋಲಾರ, ಅ 27 (DaijiworldNews/MS): ಕೋಲಾರ ಜಿಲ್ಲಾಸ್ಪತ್ರೆಯಿಂದ 6 ದಿನದ ನವಜಾತ ಶಿಶುವನ್ನು ಅಪಹರಿಸಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ದೂರು ದಾಖಲಾದ 6 ಗಂಟೆಯಲ್ಲೆ ಮಗು ರಕ್ಷಿಸಿ, ತಾಯಿಗೆ ಪೊಲೀಸರು ಒಪ್ಪಿಸಿದ್ದು, ಆರೋಪಿ ಮಹಿಳೆಯೋರ್ವಳನ್ನು ಬಂಧಿಸಿದ್ದಾರೆ.
ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಘಟಕದಲ್ಲಿ 6 ದಿನದ ಗಂಡು ಶಿಶುವನ್ನು ಮೂವರು ಮಹಿಳೆಯರು ಅಪಹರಿಸಿರುವ ಘಟನೆ ಗುರುವಾರ ಸಂಜೆ ವರದಿಯಾಗಿತ್ತು. ಈ ಘಟನೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿತ್ತು.
ಪ್ರಕರಣ ದಾಖಲಾದ ಕೇವಲ 6 ಗಂಟೆಯಲ್ಲೆ ಮಗುವನ್ನು ರಕ್ಷಿಸಿ, ತಾಯಿಗೆ ಒಪ್ಪಿಸಿದ್ದಾರೆ. ಬಂಧಿತ ಮಹಿಳೆಯನ್ನು ಸ್ವಾತಿ ಎಂದು ಗುರುತಿಸಿದ್ದಾರೆ. ಈ ಮಗುವನ್ನು ತಮಿಳುನಾಡಿಗೆ ರವಾನಿಸಲು ಸ್ವಾತಿ ಪ್ಲಾನ್ ಮಾಡಿಕೊಂಡಿರುವ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಸಾಥ್ ನೀಡಿದ ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ತಾಯಿ ಮಗುವಿನ ಚಿತ್ರವನ್ನು ಹಾಕಿ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆಯ ಸಾಲುಗಳನ್ನು ಬರೆದಿದ್ದಾರೆ. “ಕೋಲಾರ ಜಿಲ್ಲಾಸ್ಪತ್ರೆಯಿಂದ ಕಳುವಾಗಿದ್ದ ನವಜಾತ ಶಿಶುವನ್ನು 24 ಗಂಟೆಗಳ ಒಳಗೆ ಮರಳಿ ತಾಯಿ ಮಡಿಲಿಗೆ ಸೇರಿಸಿರುವ ಕೋಲಾರ ಜಿಲ್ಲಾ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣ ಬೇಧಿಸಿದ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.