ಹಾವೇರಿ, ಅ 29 (DaijiworldNews/HR): ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿ ನನ್ನ ಬಗ್ಗೆ ಏನೇನೋ ಮಾತಾಡಿ ಅಪಪ್ರಚಾರ ನಡೆಸಿದರು. ಆದರೆ ಅವರಿಗೆ ಜನ ತಕ್ಕ ಉತ್ತರ ನೀಡಿ ನನ್ನನ್ನು ಗೆಲ್ಲಿಸಿದರು ಎಂದು ಶಾಸಕ ರಮೇಶ್ ಜಾರಕಿಹೊಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿಯೊಬ್ಬರಿಗೂ 5,000 ಹಣ ನೀಡಿ ಮತ ಪಡೆಯುವೆ ಅಂದಿದ್ದರು. ಆದರೆ ಕರ್ನಾಟಕದಲ್ಲಿ ಇಂದು ಕಾಂಗ್ರೆಸ್ಸರ್ಕಾರ ಅಧಿಕಾರದಲ್ಲಿದೆ. ನಾನು ಮಂತ್ರಿ ಆಗಿರುವೆ. ಜನತೆ ನಮ್ಮ ಜೊತೆ ಇರುವವರೆಗೂ ಏನೂ ಮಾಡಲು ಆಗುವುದಿಲ್ಲ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೇ ಸಾಕ್ಷಿಯಾಗಿದ್ದಾರೆ ಎಂದರು.
ಇನ್ನು 2ಎ ಮೀಸಲಾತಿ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಪಂಚಮಸಾಲಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ಸಿಗಬೇಕು. ಸರ್ಕಾರದ ಒಳಗೂ, ಹೊರಗೂ ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.